ಮಹಿಳಾ ಅಧಿಕಾರಿ ವಿರುದ್ದ ಪಿತೂರಿ ಪ್ರತಿಭಟನೆ ಎಚ್ಚರಿಕೆ

ಕೋಲಾರ,ಮೇ.೨೬:ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರು ದಲ್ಲಾಳಿಗಳ ಹಾಗೂ ಮಂಡಿ ಮಾಲೀಕರು ರೈತರಿಗೆ ವಂಚನೆ ನಡೆಸುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದಕ್ಕೆ ಅಧಿಕಾರಿಯನ್ನು ಬ್ಲಾಕ್ ಮೇಲ್ ಮಾಡುವ ತಂತ್ರವನ್ನು ದಲ್ಲಾಳಿಗಳು ಅನುಸರಿಸುತ್ತಿದ್ದಾರೆ. ನಿಷ್ಠಾವಂತ ಅಧಿಕಾರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸದಿದ್ದರೆ ಮಾರುಕಟ್ಟೆ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳವುದಾಗಿ ದಲಿತ ಸಂಘರ್ಷ ಸಮಿತಿ ಹಾಗೂ ಬೋವಿ ಯುವ ವೇದಿಕೆ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ನಗರದ ನಚಿಕೇತನ ನಿಲಯದಲ್ಲಿ ಸಭೆ ಸೇರಿದ ದಲಿತ ಸಂಘಟನೆಗಳು ಮತ್ತು ಬೋವಿ ಯುವ ವೇದಿಕೆ ಸಂಘಟನೆಗಳ ಮುಖಂಡರು ಮಾತನಾಡಿ, ಸುಖಸುಮ್ಮನೆ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಎಪಿಎಂಸಿ ಮಾರುಕಟ್ಟೆಯ ದಲ್ಲಾಳಿಗಳ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ಸಂಘಟನೆಗಳ ಮುಖಂಡರು ನೀಡಿದ್ದಾರೆ.
ಬೋವಿ ಯುವ ವೇದಿಕೆ ಅಧ್ಯಕ್ಷ ಎಲ್.ಜಿ ಮುನಿರಾಜ್ ಮಾತನಾಡಿ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರ ಅವಧಿಯಲ್ಲಿ ಮಾರುಕಟ್ಟೆ ಅಚ್ಚುಕಟ್ಟಾಗಿ ಯಾವುದೇ ಅಕ್ರಮಗಳಿಗೆ ಆಸ್ಪದ ಇಲ್ಲದೇ ನಡೆದುಕೊಂಡು ಹೋಗುತ್ತಿದೆ. ಇದಕ್ಕೂ ಮುಂಚೆ ದಲ್ಲಾಳಿಗಳು ಇಷ್ಟಬಂದ ರೀತಿಯಲ್ಲಿ ರೈತರಿಗೆ ಅನ್ಯಾಯ ಮಾಡೊದು, ರೈತರಿಗೆ ಸರಿಯಾದ ರಸೀದಿ ನೀಡದೇ ಕಮಿಷನ್ ರೂಪದಲ್ಲಿ ಹೆಚ್ಚಿನ ಹಣ ಪಡೆಯುವುದು, ತರಕಾರಿ ಸೇಲ್ ಅಗಿಲ್ಲವೆಂದು ಕಡಿಮೆ ರೇಟ್ಗೆ ತರಕಾರಿ ಕೊಂಡು ಪಕ್ಕದ ಲೈನ್ ನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ರೈತರಿಗೆ ವಂಚನೆ ನಡೆಸುವುದು. ಪ್ರತಿ ಶನಿವಾರ ರಜೆ ಹಾಕಿ ರೈತರು ತಂದಿದ್ದ ತರಕಾರಿಗಳನ್ನು ಮರುದಿನ ಅತಿ ಕಡಿಮೆ ರೇಟ್ ಗೆ ತೆಗೆದುಕೊಂಡು ರೈತರಿಗೆ ಮೋಸ ಮಾಡುವುದನ್ನು ದಲ್ಲಾಳಿಗಳು ನಡೆಸುತ್ತಿದ್ದರು ಎಂದು ದೂರಿದರು.
ಮಹಿಳಾ ಅಧಿಕಾರಿಯು ರೈತರ ಪರ ನಿಂತಿದ್ದಕ್ಕೆ ಕಿರುಕುಳ ನೀಡುತ್ತಿರುವ ದಲ್ಲಾಳಿಗಳ ಕಾರ್ಯವೈಖರಿ ಖಂಡನಾರ್ಹವಾಗಿದೆ ಇವುಗಳೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮುಂದೆ ಜಾತ್ಯಾತೀತ ಹಾಗೂ ಪಕ್ಷತೀತವಾಗಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಡಿಎಸ್‌ಎಸ್ ಸಂಘಟನೆಯ ರಾಜಕುಮಾರ್, ಪ್ರಕಾಶ್, ಡಿಪಿಎಸ್ ವೆಂಕಟೇಶ್, ಜಗದೀಶ್, ರಾಜೇಶ್, ಶ್ರೀರಾಮ, ತಾಲ್ಲೂಕು ಬೋವಿ ಯುವ ವೇದಿಕೆ ಅಧ್ಯಕ್ಷ ಪ್ರಕಾಶ್, ಕೆಜಿಎಫ್ ಬೋವಿ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಹಾಗೂ ತೇರಹಳ್ಳಿ ರಾಜು ಉಪಸ್ಥಿತರಿದ್ದರು.