ಮಹಿಂದ್ರಾ, ಟೊಯೊಟೊ ಜತೆ ಬೀದರ್ ಪಾಲಿಟೆಕ್ನಿಕ್ ಒಡಂಬಡಿಕೆ

ಬೀದರ್:ಎ.9: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಮೂರು ವರ್ಷಗಳ ಅವಧಿಗೆ ವಿದ್ಯಾರ್ಥಿಗಳಿಗೆ ಶಿಶಿಕ್ಷು ತರಬೇತಿ ಹಾಗೂ ಉದ್ಯೋಗಕ್ಕಾಗಿ ನೆರೆಯ ತೆಲಂಗಾಣದ ಜಹೀರಾಬಾದ್‍ನ ಮಹಿಂದ್ರಾ ರೈಸ್ ಹಾಗೂ ಟೊಯೊಟಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

2022-23ನೇ ಸಾಲಿನಲ್ಲಿ ಮೆಕ್ಯಾನಿಕಲ್, ಆಟೊಮೊಬೈಲ್ ವಿಭಾಗಗಳು ಸೇರಿದಂತೆ ಪಾಲಿಟೆಕ್ನಿಕ್‍ನ ಒಟ್ಟು 80 ವಿದ್ಯಾರ್ಥಿಗಳು ಮಹಿಂದ್ರಾ ಕಂಪನಿಗೆ ಶಿಶಿಕ್ಷು ತರಬೇತಿ ಹಾಗೂ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕ ರೂ. 12 ಸಾವಿರ ಶಿಷ್ಯವೇತನ ದೊರೆಯಲಿದೆ. ಬಳಿಕ ಕಂಪನಿ ನಿಯಮಾನುಸಾರ ವೇತನ ಹಾಗೂ ಇತರ ಸೌಲಭ್ಯಗಳು ಸಿಗಲಿವೆ ಎಂದು ಪಾಲಿಟೆಕ್ನಿಕ್‍ನ ಪ್ಲೆಸ್‍ಮೆಂಟ್ ಅಧಿಕಾರಿ ಮಹೇಶ ಶೇಗೆದಾರ್ ತಿಳಿಸಿದ್ದಾರೆ.

ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗಗಳ ವಿದ್ಯಾರ್ಥಿಗಳಿಗೂ ಶಿಶಿಕ್ಷು ತರಬೇತಿ ಹಾಗೂ ಉದ್ಯೋಗಕ್ಕೆ ಅವಕಾಶ ಇದೆ. ಒಡಂಬಡಿಕೆಯಿಂದಾಗಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಪಾಲಿಟೆಕ್ನಿಕ್‍ನೊಂದಿಗೆ ಒಡಂಬಡಿಕೆ ಮಾಡಿಕೊಂಡ ಮಹಿಂದ್ರಾ ಕಂಪೆನಿ ಪ್ರತಿನಿಧಿಗಳಿಗೆ ಪಾಲಿಟೆಕ್ನಿಕ್ ಪ್ರಾಚಾರ್ಯ ಮಲ್ಲಿಕಾರ್ಜುನ ಬಿ.ಆರ್. ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಮಹಿಂದ್ರಾ ಕಂಪನಿ ಉಪ ಪ್ರಧಾನ ವ್ಯವಸ್ಥಾಪಕ ರವಿ ಅಂದವರಪ್ಪ, ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸ್ಥಾಪಕ ವಿ. ಲಕ್ಷ್ಮೀನಾರಾಯಣ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರೂ ಆದ ಪ್ಲೆಸ್‍ಮೆಂಟ್ ಅಧಿಕಾರಿ ಮಹೇಶ ಶೇಗೆದಾರ್, ಆಟೊಮೊಬೈಲ್ ವಿಭಾಗದ ಮುಖ್ಯಸ್ಥ ಅಣ್ಣೆಪ್ಪ ಕೋಟ್ರೆ, ಉಪನ್ಯಾಸಕರಾದ ಡೇವಿಡ್, ಅರುಣ ಮೋಕಾಶಿ, ಶ್ರೀಕಾಂತ ಇದ್ದರು.