ಮಹಾ ಸೋಂಕು ಹೆಚ್ಚಳ ರಾತ್ರಿ ಕರ್ಫ್ಯೂಗೆ ಉದ್ಧವ್ ಚಿಂತನೆ

ನವದೆಹಲಿ, ಡಿ.೨೧- ದೇಶದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ನಿನ್ನೆ ದಾಖಲಾಗಿದ್ದ ಪ್ರಕರಣಗಳಿಗಿಂತ ಶೇ. ೮.೫ ರಷ್ಟು ಕಡಿಮೆಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ೨೪೩೩೭ ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ೧ ಕೋಟಿ ೫೫ ಸಾವಿರದ ೫೬೦ಕ್ಕೆ ಏರಿಕೆಯಾಗಿದೆ.

ನಿನ್ನೆ ೨೬,೬೨೪ ಪ್ರಕರಣಗಳು ದಾಖಲಾಗಿದ್ದವು ನಿನ್ನೆಗೆ ಹೋಲಿಸಿದರೆ ಇಂದು ಶೇಕಡಾ ೮.೫ ರಷ್ಟು ಪ್ರಕರಣಗಳು ಕಡಿಮೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ ೨೪ ಗಂಟೆಗಳಲ್ಲಿ ೩೩೩ ಮಂದಿ ಮೃತಪಟ್ಟಿದ್ದು ಇದುವರೆಗೂ ಮೃತಪಟ್ಟವರ ಸಂಖ್ಯೆ ೧,೪೫,೮೧೦ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ ೩ ಲಕ್ಷದ ೩ಸಾವಿರದ ೬೩೯ ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ದೇಶದಲ್ಲಿ ೯೬,೦೬,೧೧೧ ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅತಿಹೆಚ್ಚಿನ ಸೋಂಕಿನ ಐದು ರಾಜ್ಯಗಳು:

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ದೇಶದ ಐದು ರಾಜ್ಯಗಳಲ್ಲಿ ಪ್ರತಿನಿತ್ಯ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಆ ಪೈಕಿ ಮಹಾರಾಷ್ಟ್ರ, ಕರ್ನಾಟಕ ,ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾತ್ರಿ ಕರ್ಫ್ಯೂ ವಿಧಿಸಲು ಮುಂದಾಗಿದ್ದಾರೆ

ಆದ್ಯತೆ ಮೇರೆಗೆ ಲಸಿಕೆ

ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಸಿದ್ಧವಾಗುತ್ತಿದ್ದಂತೆ ಅದನ್ನು ಆದ್ಯತೆ ಮೇರೆಗೆ ಜನರಿಗೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಈಗಾಗಲೇ ಕೆಲವು ಔಷಧ ತಯಾರಿಕಾ ಸಂಸ್ಥೆಗಳು ಭಾರತೀಯ ಔಷಧ ಮಹಾ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿವೆ . ಔಷಧೀಯ ಗುಣಮಟ್ಟ ಮತ್ತು ಲಸಿಕೆಯ ಸಾಮರ್ಥ್ಯವನ್ನು ಪರಿಗಣಿಸಿ ಅನುಮತಿ ನೀಡಿದ ನಂತರ ಅದನ್ನು ಜನರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ
ಸೋಂಕಿನಿಂದ ದೇಶದಲ್ಲಿ ಚೇತರಿಸಿಕೊಳ್ಳುವ ಪ್ರಮಾಣ ಶೇಕಡ ೯೬ಕ್ಕೂ ಅಧಿಕವಾಗಿದೆ.