ಮಹಾ ಶಿವರಾತ್ರಿ ಪರಿಶುದ್ಧ ಭಕ್ತಿಯ ಸಂದೇಶದ ಆಚರಣೆ

ಕಲಬುರಗಿ:ಮಾ.06:ನಮ್ಮ ಮನದ ಶುದ್ಧಿಕರಣದ ಅವಲೋಕನಕ್ಕೆ ಕಾರಣವಾದ, ಭಕ್ತಿಯಲ್ಲಿ ಮನದ ಪರಿಶುದ್ಧತೆ ಅಭಿವ್ಯಕ್ತಗೊಳ್ಳಬೇಕೆಂಬ, ಭಕ್ತಿಯು ಸರಳ ಹಾಗೂ ಸಹಜತೆಯಿಂದ ಕೂಡಿರಬೇಕು, ಜೊತೆಗೆ ಪರಮಾತ್ಮನ ಬೆಳಕು ಕಾಣುವುದೇ ನಮ್ಮ ಭಕ್ತಿಯ ಉದ್ದೇಶವಾಗಿರಬೇಕು. ಇಂತಹ ಅಂಶಗಳು ನಮ್ಮಲ್ಲಿ ಮೂಡಿದಾಗ ಆಗ ಭಕ್ತಿಯು ಸಾರ್ಥಕತೆಯನ್ನು ಪಡೆಯುತ್ತದೆಯೆಂಬ ಮೇರು ಸಂದೇಶವು ಮಹಾ ಶಿವರಾತ್ರಿ ಹಬ್ಬವು ಹೊಂದಿದೆ ಎಂದು ಪೂಜ್ಯ ನಾಗೇಶ ಸ್ವಾಮಿಜಿ ಹೇಳಿದರು.
ನಗರದ ಶಹಾಬಜಾರ ನಾಕಾ ಸಮೀಪವಿರುವ ಐತಿಹಾಸಿಕ ಮತ್ತು ಬಹು ಪುರಾತನ ಸ್ಥಂಬ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಜರುಗಿದ ‘ಮಹಾ ಶಿವರಾತ್ರಿ ಸಂದೇಶ ಕಾರ್ಯಕ್ರಮ’ದಲ್ಲಿ ಅವರು ಆಶಿರ್ವಚನ ನೀಡುತ್ತಿದ್ದರು.
ಎಲ್ಲರಲ್ಲಿಯೂ ಭಕ್ತಿಯನ್ನು ಹೆಚ್ಚಿಸುವ, ಅಪ್ರತಿಮ, ಅಗೋಚರ, ಪರಿಪೂರ್ಣತೆಯ ಶಕ್ತಿಯಾದ ಶಿವನನ್ನು ಆರಾಧಿಸುವ ಹಬ್ಬವೇ ಮಹಾ ಶಿವರಾತ್ರಿಯಾಗಿದೆ. ಜಗತ್ತಿನ ಸಕಲ ಜೀವರಾಶಿಗಳಲ್ಲಿ ಚೈತನ್ಯಾತ್ಮಕ ಶಕ್ತಿಯೇ ಪರಮಾತ್ಮನಾಗಿದ್ದಾನೆ. ಎಲ್ಲಾ ಚಟುವಟಿಕೆಗಳ ಒಡೆಯನಾದ ಶಿವನ ಆರಾಧನೆಯು ಭಾರತೀಯ ಸಂಸ್ಕøತಿಯಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಮನುಷ್ಯ ಸಂಸಾರದ ಜಂಜಾಟದಲ್ಲಿ, ದಿನನಿತ್ಯದ ಒತ್ತಡದ ಬದುಕಿನಲ್ಲಿ ಶಾಂತಿಯನ್ನು ಕಳೆದುಕೊಂಡು, ಅಶಾಂತಿಯನ್ನು ಎದುರಿಸುತ್ತಿದ್ದಾನೆ. ಪ್ರಸ್ತುತ ದಿನಗಳಲ್ಲಿ ಮಾನಸಿಕ ನೆಮ್ಮದಿಗಾಗಿ ಭಕ್ತಿ, ಧ್ಯಾನ ಅವಶ್ಯಕತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಮಧುಸೂದನ ಮಾಲು, ಅಂಬಾರಾಯ ಕಡಗಂಚಿ, ವಿಜಯಕುಮಾರ ಮೇಂಗಜಿ, ಶಂಕರರಾವ ಗಯಾಲೆ, ನಂದಕಿಶೋರ್ ಚವ್ಹಾಣ, ನರೇಶ ಸತ್ವಾಶಿ, ಜಗದೀಶ್ ದಾಲಿಮಕರ್, ಕಾಂತಾವ್ಯಾಸ್, ರೇಣುಕಾ, ಕೇಸರ್, ಲಕ್ಷ್ಮೀ ಠಾಕೂರ್, ಮೀನಾಕ್ಷೀ ಸಿಂಗಾರಿ ಸೇರಿದಂತೆ ಮತ್ತಿತರರಿದ್ದರು.