ಮಹಾ ಮೃತ್ಯುಂಜಯ ಮಂತ್ರದಿಂದ ಕೋವಿಡ್ ನಿರ್ಮೂಲನೆ: ವೀರುಪಾಕ್ಷ ಶಿವಾಚಾರ್ಯರು

(ಸಂಜೆವಾಣಿ ವಾರ್ತೆ)
ಬೀದರ:ಎ.19: ಕೋವಿಡ್ ಮಾತ್ರವಲ್ಲದೆ ಯಾವುದೇ ಸಾಂಕ್ರಾಮಿಕ ರೋಗಗಳ ನಾಶವಾಗಬೇಕಾದರೆ ಮಹಾ ಮೃತ್ಯುಂಜಯ ಮಂತ್ರ ನಿತ್ಯ ಪಠಿಸಬೇಕೆಂದು ಹುಡಗಿಯ ಹಿರೇಮಠ ಸಂಸ್ಥಾನದ ಪೂಜ್ಯ ಷ.ಬ್ರ ವೀರುಪಾಕ್ಷ ಶಿವಾಚಾರ್ಯರು ಅಭಿಪ್ರಾಯ ಪಟ್ಟರು.
ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸೇವಾ ಸಮಿತಿ ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭೆ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಭಾನುವಾರ ಜರುಗಿದ ಶ್ರೀ ಜಗದ್ಗುರು ಪಂಚಾವಾರ್ಯ ಯುಗಮಾನೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶಿವರ್ವಚನ ನೀಡಿದರು.
ಗುರು-ವಿರಕ್ತರು ಒಂದಾಗಿ ನಡೆಯಬೇಕು, ಸಂಘಟಿತರಾಗಬೇಕು, ಧರ್ಮದ ಚೌಕಟ್ಟಿನಡಿ ನಡೆಯಬೇಕು, ಆಷ್ಟಾವರಣ, ಪಂಚಾಚಾರ್ಯ, ಷಟಸ್ಥಲ ಇದೆಲ್ಲವನ್ನು ಬಲ್ಲವರಾಗಬೇಕು. ಗುರು, ಲಿಂಗ ಹಾಗೂ ಜಂಗಮ ಪರಿಕಲ್ಪನೆಯನ್ನು ರೇಣುಕಾದಿಯಾಗಿ ಅಣ್ಣ ಬಸವಣ್ಣನವರು ಸಹ ಇದನ್ನೆ ಒತ್ತಿ ಹೇಳಿದರು. ಆದರೆ, ದುರ್ದೈವಶಾತ ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಂಡು ಇಂದು ಸಮಾಜದ ದಾರಿ ತಪ್ಪಿಸುತ್ತಿರುವರು ಎಂದು ದೂರಿದರು.
ಅಹಿಂಸೆ ಮಾರ್ಗದಡಿ ನಡೆದು, ಸತ್ಯವನ್ನೇ ಪ್ರಾಣವನ್ನಾಗಿ ಸ್ವೀಕರಿಸಿ, ಅಸ್ತ್ಯ ಹಾಗೂ ಬ್ರಹ್ಮಚರ್ಯ ಪಾಲಿಸಬೇಕು. ನಿತ್ಯ ಲಿಂಗಪೂಜೆ ನಮ್ಮ ಉಸಿರಾಗಬೇಕು. ಪೂಜೆ, ಜಪ, ಧ್ಯಾನ ಹಾಗೂ ಯೋಗ ನಮ್ಮ ನಡೆಯಾಗಬೇಕು. ಪಾದೋದಕ ಹಾಗೂ ಪ್ರಸಾದ ಬಗ್ಗೆ ಗೌರವ ಇರಬೇಕು. ಧಾರ್ಮಿಕ ಸಂಹಿಷ್ಣತೆ, ಅಧ್ಯಾತ್ಮದ ಔಚಿತ್ಯ, ತಾತ್ವಿಕ ನೆಲೆಗಟ್ಟಿನಲ್ಲಿ ನಮ್ಮ ಜೀವನ ನಡೆಸಿದಲ್ಲಿ ಅದು ಸಾಕ್ಷಾತ್ಕಾರದ ಬದುಕಾಗಲಿದೆ. ಒಟ್ಟಾರೆ ನಾವೆಲ್ಲರು ಧರ್ಮದ ಚೌಕಟ್ಟಿನಡಿ ಬಾಳಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಹಿರೇನಾಗಾಂವ ವಿರಕ್ತಮಠದ ಪೂಜ್ಯ ಮ.ನಿ.ಪ್ರ ಜಯಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ನಾವೆಲ್ಲರು ಒಂದಾಗಬೇಕಾಗಿದೆ. ಪರಸ್ಪರ ದ್ವೇಷ, ಅಸುಯೆ ತ್ಯಜಿಸಬೇಕು. ಇತ್ತಿಚಿಗೆ ಹುಟ್ಟಿರುವ ಇಸ್ಲಾಮ್, ಕ್ರೈಸ್ತ ಇತ್ಯಾದಿ ಧರ್ಮಗಳು ಎತ್ತರಕ್ಕೆ ಬೆಳೆದರೂ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಪಂಚಾಚಾರ್ಯ ಧರ್ಮ ಅತ್ಯಂತ ಹಿಂದುಳಿಯಲಿಕ್ಕೆ ನಮ್ಮಲ್ಲಿನ ಅಹಂಕಾರ ಮುಖ್ಯ ಕಾರಣವಾಗಿದ್ದು, ಅದನ್ನು ಬಿಟ್ಟು ಗುರು-ವಿರಕ್ತರು ಒಂದಾಗಬೇಕು, ಈ ಕಾರ್ಯ ಸ್ವಾಮಿಜಿಗಳು ಮುಂದೆ ನಿಂತು ಮಾಡಬೇಕೆಂದು ಕರೆ ನೀಡಿದರು.
ಮೇಹಕರ, ತಡೋಳಾ ಹಾಗೂ ಡೋಣಗಾಪುರ ಹಿರೇಮಠ ಸಂಸ್ಥಾನದ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಭಾರತ ಯೋಗ, ತ್ಯಾಗ ಹಾಗೂ ತಪೋಭೂಮಿಯಾಗಿದೆ. 5 ಸಾವಿರ ವರ್ಷಗಳ ಇತಿಹಾಸ ಹೊಂದಿದ ರೇಣುಕಾಚಾರ್ಯರು ಪ್ರಾಣ ತತ್ವವನ್ನು ತನ್ನ ಆಧಿನದಲ್ಲಿ ಇರಿಸಿಕೊಂಡ ಮಹಾನ ಶಕ್ರಿಗಳು. ಈ ಭೂಮಿ ಪಂಚತತ್ವಗಳಿಂದ ಕೂಡಿದ್ದು ಅಣಿಮ, ಮಹಿಮ, ಗರಿಮ, ಲಗಿಮ, ಪ್ರಾಪ್ತಿ, ಪ್ರಾಕಾಮ್ಯ, ಈಶದ್ವ ಹಾಗೂ ಸಿದ್ದಿ ಎಂಬ ಎಂಟು ಯೋಗ ಅವಸ್ಥೇಗಳು ಯೋಗಿಗಳು ಹೊಂದಿದ್ದರು. ಪೂರ್ವ ಕಾಲದಲ್ಲಿ ಗುರುಕುಲದಲ್ಲಿ ಯೋಗ ಶಿಕ್ಷಣವೇ ಪ್ರಧಾನವಾಗಿತ್ತು. ಆದರೆ, ಮೇಕಾಲೆ ಎಂಬಾತನು 1856ರಲ್ಲಿ ಭಾರತೀಯ ಗುರುಕುಲ ಪರೆಂಪರೆ ಹಾಳು ಮಾಡಿ ಆಂಗ್ಲ ಶಿಕ್ಷಣದ ಹುಚ್ಚು ಹಚ್ಚಿಸಿದ ಅದರ ಫಲವಾಗಿ ಇಂದು ನಾವೆಲ್ಲರು ತನ್ನ ತನ ಕಳೆದುಕೊಂಡಿದ್ದು ಅದನ್ನು ಪುನರೂಜ್ಜೀವನಕ್ಕಾಗಿ ಇಂಥ ಕಾರ್ಯಕ್ರಮಗಳಿಗೆ ಮಾರು ಹೋಗಬೇಕೆಂದು ಹೇಳಿದರು.
ನೌಬಾದ್ ಶಿವಯೋಗಾಶ್ರಮದ ಪೂಜ್ಯ ಡಾ.ರಾಜಶೇಖರ ಶಿವಾಚಾರ್ಯರು ಮಾತನಾಡಿ, ಸರ್ಕಾರ ಬರುವ ವರ್ಷದಿಂದ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಬೇಕು, ಸಿದ್ದಾಂತ ಶಿಖಾಮಣಿ ಅಧ್ಯಯನ ಪೀಠವನ್ನು ಯಾವುದಾದರೊಂದು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಬೇಕು, ಬೀದರ್‍ನಲ್ಲಿ ಜಗದ್ಗುರು ಪಂಚಾಚಾರ್ಯ ಮಂದಿರ ಸ್ಥಾಪಿಸಬೇಕು, ದೇಶದ 23 ಭಾಷೆಗಳಲ್ಲಿ ಸಿದ್ದಾಂತ ಶಿಖಾಮಣಿ ತಜ್ರ್ಯುಮೆ ಮಾಡಿದ್ದು ಇದನ್ನು ಪ್ರತಿ ಜಂಗಮರ ಮನೆಗಳಲ್ಲಿ ಪೂಜಿಸಿ, ನಮ್ಮ ಯುವಜನರು ಅದನ್ನು ಪಠಣ ಮಾಡಬೇಕೆಂದು ಕರೆ ನೀಡಿದರು.
ರಾಜೇಶ್ವರ ಹಿರೇಮಠದ ಪೂಜ್ಯ ಷ.ಬ್ರ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಚಾಂಬೋಳ ಹಿರೇಮಠ ಸಂಸ್ಥಾನದ ಪೂಜ್ಯ ಮೂರುಘೇಂದ್ರ ದೇವರು, ಅಖಿಲ ಭಾರತೀಯ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಹಳ್ಳಿ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಾಳೆ, ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಮಹಾ ಮಂಡಳಿ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ಮಾತನಾಡಿದರು. ಕೇಂದ್ರ ಸರ್ಕಾರದ ಜಾಗೃತಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಷ.ಬ್ರ ಗಂಗಾಧರ ಶಿವಾಚಾರ್ಯರು ನೆತೃತ್ವ ವಹಿಸಿದ್ದರು.
ಹಳ್ಳಿಖೇಡ ಚಿಕ್ಕಮಠದ ಪೂಜ್ಯ ಷ.ಬ್ರ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಕಮಠಾಣಾ ಗವಿಮಠದ ಪೂಜ್ಯ ಷ.ಬ್ರ ರಾಚೋಟೇಶ್ವರ ಶಿವಾಚಾರ್ಯರು, ಬೆಮಳಖೇಡ ಹಿರೇಮಠ ಸಂಸ್ಥಾನದ ಪೂಜ್ಯ ಷ.ಬ್ರ ಡಾ.ಚಂದ್ರಶೇಖರ ಶಿವಾಚಾರ್ಯರು, ಡಾಕುಳಗಿಯ ಪೂಜ್ಯ ಚನ್ನಬಸವ ಮಹಾಸ್ವಾಮಿಗಳು, ಚಿಲ್ಲರ್ಗಿಯ ಹಿರೇಮಠ ಸಂಸ್ಥಾನದ ಪೂಜ್ಯ ಗುರುಪಾದ ಮಹಾಸ್ವಾಮಿಗಳು, ಹುಡಗಿ ವಿರಕ್ತಮಠದ ಪೂಜ್ಯ ಚನ್ನಮಲ್ಲ ಸ್ವಾಮಿಗಳು, ಖಟಕಚಿಂಚೋಳಿ ಹುಗ್ಗೆಳ್ಳಿ ಹಿರೇಮಠದ ಪೂಜ್ಯ ಬಸವಲಿಂಗ ಸ್ವಾಮಿಗಳು, ಮೈನಳ್ಳಿಯ ಪೂಜ್ಯ ಶಂಕರಲಿಂಗ ಸ್ವಾಮಿಗಳು, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಪಂಚಾಚಾರ್ಯ ಪರ್ಯೆಂಪರೆ ಒಳಗೊಂಡಂತಹ ಸ್ವಯಂಪ್ರಭೆ ಪುಸ್ತಕ ಬಿಡುಗಡೆ ಮಾಡಲಾಯಿತು. ಜೊತೆಗೆ ಪ್ರತಿ ವರ್ಷ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಿಸಲು ಶಾಶ್ವತ ನಿಧಿ ನೀಡಿದ ಅನೇಕರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ಕು.ಶಶಿಕಲಾ ಪಾಟೀಲ ಶಿವ ತಾಂಡವ ನೃತ್ಯ ಗೈದರು. ವಿನಯ ಮಠ ಮಹಾದೇವನ ಕುರಿತು ಗಾಯನ ಮಾಡಿದರು. ಸಿದ್ದಯ್ಯ ಸ್ವಾಮಿ ಮರ್ಪಳ್ಳಿ ಪ್ರಾಥ್ರ್ನಿಸಿದರು. ಸಂಜು ಸ್ವಾಮಿ ಕಂದಗುಳ ಹಾಗೂ ಮಲ್ಲಿಕಾರ್ಜುನ್ ನಾಗಮಾರಪಳ್ಳಿ ಸಂಗೀತ ಸೇವೆ ಉಣಬಡಿಸಿದರು. ಸತೀಶ ಸ್ವಾಮಿ ಸ್ವಾಗತಿಸಿದರೆ, ಶ್ರೀಕಾಂತ ಸ್ವಾಮಿ ಸೋಲಪೂರ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್.ಎಮ್.ಮಠಪತಿ ವಂದಿಸಿದರು.