ಮಹಾ ಮೀಸಲಾತಿ ಹೋರಾಟ ಸಚಿವರ ಕಾರು ಧ್ವಂಸ

ಮುಂಬೈ, ನ.೧- ಮಹಾರಾಷ್ಟ್ರದಲ್ಲಿ ಮೀಸಲಾತಿಗಾಗಿ ಮರಾಠಿಗರು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದೆ. ಮೀಸಲಾತಿ ಹೋರಾಟಗಾರರು ಮಹಾರಾಷ್ಟ್ರ ಸಚಿವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದು ಕಾರಿಗೆ ಹಾನಿಯಾಗಿದೆ.ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ವೇಳೆ ರೊಚ್ಚಿಗೆದ್ದ ಪ್ರತಿಭಟನಾಗಾರರು ಸಚಿವ ಹಸನ್ ಅಶಿರಿಫ್ ಕಾರನ್ನು ಜಖಂಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.ಬುಧವಾರ ಬೆಳಗ್ಗೆ ಮರಾಠ ಮೀಸಲಾತಿ ಪ್ರತಿಭಟನೆಯ ಕಾರ್ಯಕರ್ತರಿಬ್ಬರು ಮರದ ದೊಣ್ಣೆಯಿಂದ ದಕ್ಷಿಣ ಮುಂಬೈಯ ಆಕಾಶವಾಣಿ ಎಂಎಲ್ ಎ ಹಾಸ್ಟೆಲ್ ಸಮೀಪ ಪಾರ್ಕ್ ಮಾಡಿದ್ದ ಸಚಿವರ ಕಾರಿನ ಗಾಜು, ಬಾಗಿಲನ್ನು ಪುಡಿಗೈದಿದ್ದರು.ಈ ಸಂದರ್ಭದಲ್ಲಿ ಏಕ್ ಮರಾಠ, ಲಕ್ಷಾಂತರ ಮರಾಠಿಗರು ಎಂಬ ಘೋಷಣೆ ಕೂಗಿರುವುದಾಗಿದ್ದಾರೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮುಶಿರಿಫ್ ಡಿಸಿಎಂ ಅಜಿತ್ ಪವಾರ್ ಬಣದ ಎನ್ ಸಿಪಿ ಶಾಸಕರಾಗಿದ್ದಾರೆ.ಇನ್ನೂ, ಅಕ್ಟೋಬರ್ ೨೬ರಂದು ಕೂಡಾ ವಾಹನಗಳನ್ನು ಜಖಂಗೊಳಿಸಿದ್ದ ಘಟನೆ ನಡೆದಿತ್ತು.
ಮರಾಠ ಮೀಸಲಾತಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಯ ಒಕ್ಕೂಟ ಬಂದ್ ಕರೆ ನೀಡಿದೆ. ಮೀಸಲಾತಿ ಸಂಬಂಧ ಮನೋಜ್ ಪಾಟೀಲ್ ಕಳೆದ ೮ ದಿನಗಳಿಂದ ನಿರ್ದಿಷ್ಠ ಅವಧಿ ಮುಷ್ಕರ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬಂದ್‌ನಿಂದಾಗಿ ಶಿವಾಜಿ ಮಾರುಕಟ್ಟೆ ಬಣಗುಡುತ್ತಿದೆ.ಎರಡು ದಿನಗಳ ಹಿಂದೆ ಮೀಸಲಾತಿ ಹೋರಾಟದ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಇದರಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಭೆ ಕರೆದ ಸಿಎಂ ಶಿಂಧೆ..!
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟವು ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಪರಿಸ್ಥಿತಿಯನ್ನು ಚರ್ಚಿಸಲು ಇಂದು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ.