ಮಹಾ ಮಳೆಗೆ ಭೂ ಕುಸಿತ 36 ಮಂದಿ ಸಾವು

ಮುಂಬೈ,ಜು.೨೩- ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ರಾಯಗಡ ಜಿಲ್ಲೆಯಲ್ಲಿ ಭೂಕುಸಿತದಿಂದ ೩೬ ಮಂದಿ ಮೃತಪಟ್ಟಿರುವ ಧಾರುಣ ಘಟನೆ ಇಂದು ನಡೆದಿದೆ. ಮಣ್ಣಿನ ಅಡಿ ಇನ್ನೂ ಮೂವತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಅವರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿಗಳು ಕ್ಷಿಪ್ರ ಬರದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದ್ದಾರೆ

ಭಾರಿ ಮಳೆಯಿಂದಾಗಿ ಮಹಾರಾಷ್ಟ್ರದ ಹಲವು ಜಿಲ್ಲೆಗಳು ಸಂಪೂರ್ಣವಾಗಿ ಸಂಪರ್ಕವನ್ನು ಕಳೆದುಕೊಂಡಿದೆ. ಈ ಮಧ್ಯೆ ರಾಯಗಡ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಈ ದುರಂತ ಸಂಭವಿಸಿದೆ.

ಕೊಂಕಣ ವಲಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತ ಸಂಭವಿಸಿ ಈ ಅನಾಹುತ ನಡೆದಿದೆ.ಮಣ್ಣಿನ ಅಡಿ ಸಿಲುಕಿರುವ ಮೃತದೇಹಗಳ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ಮಳೆಯಿಂದ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಮಹಾರಾಷ್ಟ್ರ ಸರ್ಕಾರ ಹೆಲಿಕಾಪ್ಟರುಗಳನ್ನು ನಿಯೋಜನೆ ಮಾಡಿದೆ. ಕೊಂಕಣ ವಲಯ ಸೇರಿದಂತೆ ಮಹಾರಾಷ್ಟ್ರದ ವಿವಿಧ ವಲಯಗಳಲ್ಲಿ ಭಾರಿ ಮಳೆ ಹಾಗೂ ಅನಾಹುತದಿಂದಾಗಿ ಜನ ಸಮಸ್ಯೆಗೆ ಸಿಲುಕಿದ್ದಾರೆ

ನಿನ್ನೆ ಸಂಜೆಯಿಂದ ಮೂರು ಸ್ಥಳಗಳಲ್ಲಿ ಭೂ ಕುಸಿತ ಹಾಗೂ ಮತ್ತಿತರ ಅನಾಹುತಗಳು ಸಂಭವಿಸಿವೆ. ಭೂಕುಸಿತ ೩೬ ಮಂದಿ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ ಇದರಿಂದಾಗಿ ಅಸಂಖ್ಯಾತ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಧಾನಿ ಮುಂಬೈನಲ್ಲಿ ಮಳೆಯಿಂದಾಗಿ ಕಟ್ಟಡ ಕುಸಿದು ಮೂರು ಮಂದಿ ಮೃತಪಟ್ಟಿದ್ದು ೧೧ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಹಲವು ನಗರಗಳು ಸಂಪೂರ್ಣವಾಗಿ ಜಲಾವೃತವಾಗಿವೆ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕೆಲಸ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ

ರಾಯಗಡ ಜಿಲ್ಲೆಯಲ್ಲಿ ಭೂಕುಸಿತದಿಂದ ೩೬ ಮಂದಿ ಸಾವು

೩೦ ಮಂದಿ ರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿ

ಜನರ ರಕ್ಷಣೆಗೆ ಹೆಲಿಕ್ಯಾಪ್ಟರ್ ನಿಯೋಜಿಸಿದ ಮಹಾರಾಷ್ಟ್ರ ಸರ್ಕಾರ

ಪ್ರವಾಹದಿಂದ ತತ್ತರಿಸಿರುವ ಮಹಾರಾಷ್ಟ್ರ ಜನರು

ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಹಲವು ನಗರಗಳು ಸಂಪೂರ್ಣ ಜಲಾವೃತ

ರಕ್ಷಣೆಗೆ ಮನೆ ಚಾವಣಿ ಏರಿದ ಜನ

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಭಾಗಗಳಲ್ಲಿ ಜನರು ರಕ್ಷಣೆಗಾಗಿ ಮನೆ ಚಾವಣಿ ಹತ್ತಿರುವ ಘಟನೆ ನಡೆದಿದೆ.

ಭೂಕುಸಿತಕ್ಕೆ ಸಿಲುಕಿ ೩೬ ಮಂದಿ ಮೃತಪಟ್ಟಿದ್ದು ಆ ಪೈಕಿ ೩೨ ಮೃತದೇಹ ಹೊರತರಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಲ್ಲಾ ಅಗತ್ಯ ಸಹಕಾರ ನೀಡುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೂಡ ಅವರು ಸೂಚನೆ ನೀಡಿದ್ದಾರೆ