ಮಹಾ ಉದ್ಧಟತನಕ್ಕೆ ಬೊಮ್ಮಾಯಿ ಆಕ್ರೋಶ

ಬೆಂಗಳೂರು, ಮೇ ೫- ಕರ್ನಾಟಕ ಸರ್ಕಾರದ ವಿರೋಧದ ನಡುವೆಯೂ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಗಡಿ ಒಳಗಿರುವ ೮೬೫ ಹಳ್ಳಿಗಳ ಗ್ರಾಮಸ್ಥರಿಗೆ ಆರೋಗ್ಯ ವಿಮೆ ಜಾರಿ ಮಾಡಿದ್ದು, ಇದು ಎರಡೂ ರಾಜ್ಯಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.ಮಹಾರಾಷ್ಟ್ರ ಸರ್ಕಾರದ ಈ ಉದ್ಧಟತನದ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ಎಲ್ಲ ಪಕ್ಷಗಳ ನೇತಾರರು ಮಹಾರಾಷ್ಟ್ರದ ಈ ಉದ್ಧಟತನವನ್ನು ಖಂಡಿಸಿದ್ದಾರೆ.
ಉದ್ಧಟತನ ಸಹಿಸಲ್ಲ ಸಿಎಂ
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಜನರಿಗೆ ವಿಮೆ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ ಅವರಿಂದ ಮಹಾರಾಷ್ಟ್ರಕ್ಕೆ ಸೇರಿದವರೆಂದೇ ಘೋಷಣಾ ಪತ್ರ ತೆಗೆದುಕೊಳ್ಳುತ್ತಿರುವುದು ಖಂಡನೀಯ. ಈ ಉದ್ಧಟತನವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಗುಡುಗಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರ ಸರ್ಕಾರ ಇದೇ ರೀತಿ ಉದ್ಧಟತನ ಮುಂದುವರೆಸಿದರೆ ಕರ್ನಾಟಕ ಸರ್ಕಾರವೂ ಸಹ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿಗೊಳಿಸುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.ಕರ್ನಾಟಕದ ೮೬೫ ಗ್ರಾಮಗಳ ಜನತೆಗೆ ಮಹಾರಾಷ್ಟ್ರ ಸರ್ಕಾರ ಬಾಬು ಜಗಜೀವನರಾಮ್ ಆರೋಗ್ಯ ವಿಮೆ ಯೋಜನೆ ಜಾರಿ ಆದೇಶ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗಿದೆ. ಮಹಾರಾಷ್ಟ್ರ ಸರ್ಕಾರ ತಕ್ಷಣ ತನ್ನ ಆದೇಶವನ್ನು ವಾಪಸ್ ಪಡೆದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಗೆ ಗೌರವ ಕೊಡುವ ಮೂಲಕ ಎರಡೂ ರಾಜ್ಯಗಳ ನಡುವೆ ಬಾಂಧವ್ಯ ಕಾಪಾಡುವ ಕೆಲಸ ಮಾಡಬೇಕು ಎಂದು ಅವರು ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಡಿ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದರೂ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಅವರು ಟ್ವೀಟ್‌ನಲ್ಲಿ ದೂರಿದ್ದಾರೆ.
ಕರ್ನಾಟಕದ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ ನೀಡಿರುವ ಉದ್ಧಟತನದ ಪರಮಾವಧಿಯಾಗಿದೆ. ಇದು ಎರಡೂ ರಾಜ್ಯಗಳ ಬಾಂಧವ್ಯ ಕದಡುವ ಪ್ರಯತ್ನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.
ಪರಿಣಾಮ ನೆಟ್ಟಗಾಗದು ಸಿದ್ಧರಾಮಯ್ಯ
ಕನ್ನಡಿಗರ ತೀವ್ರ ವಿರೋಧದ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ ೮೬೫ ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು ಇದನ್ನು ಸಹಿಸಲು ಸಾಧ್ಯವೇ ಇಲ್ಲ ಈ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ತಕ್ಷಣ ವಾಪಸ್ ಪಡೆಯದೇ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಗುಡುಗಿದ್ದಾರೆ.ರಾಜ್ಯದ ಗಡಿಯೊಳಗೆ ಆರೋಗ್ಯ ವಿಮೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಯತ್ನಿಸಿದಾಗಲೇ ನಾವು ವಿರೋಧಿಸಿದ್ದೇವು. ಅಲ್ಲಿಯವರೆಗೂ ತೆಪ್ಪಗಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ನಮ್ಮ ಒತ್ತಡಕ್ಕೆ ಮಣಿದು ವೀರಾವೇಶದ ಮಾತುಗಳನ್ನಾಡಿದರು. ಆವೇಶ, ಬದ್ಧತೆಯನ್ನು ತೋರಿಸುವ ಕಾಲ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು. ಇವರಿಬ್ಬರ ಮಾತಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಕಡವೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಗಡಿ ವಿವಾದ ಇತ್ಯರ್ಥಗೊಳ್ಳುವವರೆಗೂ ಎರಡೂ ರಾಜ್ಯಗಳು ವಿವಾದವನ್ನು ಕೆದಕಬಾರದು ಎಂದು ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿ ಎರಡೂ ರಾಜ್ಯಗಳ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದ್ದರು ಆ ಸೂಚನೆಯನ್ನೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದಿಕ್ಕರಿಸಿದ್ದಾರೆ. ರಾಜಕೀಯ ಲಾಭದ ದುರುದ್ಧೇಶದಿಂದ ಮಹಾರಾಷ್ಟ್ರ ಆಗಾಗ ಗಡಿ ತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುವುದು ಖಂಡನೀಯ. ಕನ್ನಡಿಗರು ಇದನ್ನು ಸಹಿಸುವುದಿಲ್ಲ ಎಂದು ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿ ಗಡಿ ವಿವಾದ ನ್ಯಾಯಾಲಯದಲ್ಲಿದೆ. ಕನ್ನಡಿಗರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ನಮಗಿದೆ ಎಂದು ಅವರು ಹೇಳಿದ್ದಾರೆ.