ಮಹಾಶಿವರಾತ್ರಿ ಹಬ್ಬದ ನಿಮಿತ್ತ 450 ಹೆಚ್ಚುವರಿ ವಾಹನಗಳ ಕಾರ್ಯಾಚರಣೆ

ಕಲಬುರಗಿ:ಮಾ.5:2024ನೇ ಸಾಲಿನ ಮಹಾಶಿವರಾತ್ರಿ ಹಾಗೂ ಶ್ರೀಶೈಲ ಮಲ್ಲಿಕಾರ್ಜನ ದೇವರ ರಥೋತ್ಸವ ನಿಮಿತ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ತಾಲ್ಲೂಕು/ಜಿಲ್ಲಾ ಕೇಂದ್ರಗಳಿಂದ ಬೆಂಗಳೂರು, ಶ್ರೀಶೈಲಂ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಒಟ್ಟು 450 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಈ ಹಬ್ಬ ಮುಗಿದ ನಂತರ ಮರಳಿ ಹೋಗುವವರಿಗೆ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಸಂಚಾರ ದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಮಾರ್ಚ್ 10 ರವರೆಗೆ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವರ ಜಾತ್ರೆಗೆ ರಾಯಚೂರು ವಿಭಾಗದ ವ್ಯಾಪ್ತಿಯ ವಿವಿಧ ತಾಲ್ಲೂಕು ಸ್ಥಳಗಳಿಂದ ಹಾಗೂ ಮಾರ್ಚ್ 6 ರಿಂದ 11 ರವರೆಗೆ ನಿಗಮದ ವ್ಯಾಪ್ತಿಯ ಇತರೆ ತಾಲ್ಲೂಕು/ಜಿಲ್ಲಾ ಸ್ಥಳಗಳಿಂದ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಇದೇ ಮಾರ್ಚ್ 7 ರಿಂದ 9 ರವರೆಗೆ ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಹಬ್ಬದ ನಂತರ ಮಾರ್ಚ್ ಮಾರ್ಚ್ 10 ರಿಂದ 12 ರವರೆಗೆ ಕ.ಕ.ರ.ಸಾ ನಿಗಮದ ವ್ಯಾಪ್ತಿಯ ವಿವಿಧ ವಿಭಾಗಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಸಂಚಾರ ದಟ್ಟಣೆಗನುಗುಣವಾಗಿ ಹೆಚ್ಚುವರಿ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿ ಇರುವ 16 ಗಣಕೀಕೃತ ಬುಕ್ಕಿಂಗ್ ಕೌಂಟರ್‍ಗಳ ಮುಖಾಂತರ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‍ನ ಹೆಸರನ್ನು ಗಮನಿಸಬೇಕು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ ಶೇ 5 ರಷ್ಟು ರಿಯಾಯತಿ ನೀಡಲಾಗುವುದಲ್ಲದೇ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ 10 ರಿಯಾಯತಿ ನೀಡಲಾಗುತ್ತದೆ. ಇದಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.