ಮಹಾಶಿವರಾತ್ರಿ ನಿಮಿತ್ಯ ಹರಳಯ್ಯನವರ ಗವಿಯಲ್ಲಿ ಸಾಮೂಹಿಕ ಇಷ್ಟಲಿಂಗಯೋಗ

ಬಸವಕಲ್ಯಾಣ:ಮಾ.9: ನಗರದ ಹರಳಯ್ಯನವರ ಗವಿಯಲ್ಲಿ ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಮಹಾ ಶಿವರಾತ್ರಿ ನಿಮಿತ್ಯ ಶುಕ್ರವಾರ ಬೆಳಗ್ಗೆ ಸಾವಿರಾರು ಶರಣ – ಶರಣೆಯರಿಂದ ಸಾಮೂಹಿಕ ಇಷ್ಟಲಿಂಗಯೋಗ, ಶೃದ್ಧೆ ಮತ್ತು ಭಕ್ತಿಯಿಂದ ನಡೆಯಿತು. ಬಿಳಿ ಉಡುಪು ಹಣೆಯ ಮೇಲೆ ವಿಭೂತಿ, ಎಡಗೈಯಲ್ಲಿ ಇಷ್ಟಲಿಂಗವಿರಿಸಿ ಗವಿಯ ಸುಂದರ ಪರಿಸರದಲ್ಲಿ ಶರಣ ಸಂಕುಲ ಇಷ್ಟಲಿಂಗ ಪೂಜೆಯಲ್ಲಿ ಭಕ್ತಿಯಿಂದ ನಿರತರಾದ ದೃಶ್ಯ ಕಣ್ಮನ ಸೆಳೆಯಿತು.
ಪೂಜ್ಯಶ್ರೀ ಡಾ. ಗಂಗಾಂಬಿಕಾ ಅಕ್ಕ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷತೆ ತೋರಿಸಿ ಮಾತನಾಡಿ ಶೂನ್ಯ ಮಹಾಲಿಂಗ ಸ್ವರೂಪಿ, ನಿರಾಕಾರ ಪರಮಾತ್ಮನ ಸಾಕಾರ ಸೃಷ್ಟಿಯಾಗಿ ಉದ್ಭವಿಸಿ ಭಕ್ತರ ಕರಸ್ಥಲದಲ್ಲಿ ಪೂರ್ಣ ತೇಜೋಮಯ ಪರಿಶುದ್ಧ ಜ್ಞಾನರೂಪಿ ಇಷ್ಟಲಿಂಗವಾಗಿ ಚುಳುಕಾಗಿದೆ. ಇಷ್ಟಲಿಂಗವು 12ನೇ ಶತಮಾನದಲ್ಲಿ ಗುರುಬಸವಣ್ಣನವರು ನೀಡಿದ ವಿಶಿಷ್ಠ ಕೊಡುಗೆಯಾಗಿದೆ. ತನ್ನೊಳಗಿನ ಪರಮಾತ್ಮನನ್ನು ಪೂಜಿಸಿ ಅರಿಯುವ ಸರಳ ವಿಧಾನ ಬಸವಾದಿ ಶರಣರು ತೋರಿದ್ದಾರೆ.
ಆಯುಷ್ಯ, ಆರೋಗ್ಯ ವೃದ್ಧಿಸುವ ಮಾನಸಿಕ ಒತ್ತಡ ನಿವಾರಿಸಿ ನೆಮ್ಮದಿ ನೀಡುವ, ನೆನಪಿನ ಶಕ್ತಿ ಹೆಚ್ಚಿಸುವ ಸಾಮಥ್ರ್ಯ ಇಷ್ಟಲಿಂಗಯೋಗದಲ್ಲಿದೆ. ಸದಾ ಕಾಲ ಇದನ್ನು ಎದೆಯ ಮೇಲೆ ಧರಿಸಿ ಪ್ರತಿ ದಿನ ಪೂಜಿಸಬೇಕು. ಇದು ಜಾತಿಯ ಕುರುಹಲ್ಲ ಜ್ಯೋತಿಯ ಕುರುಹಾಗಿದೆ. ಆತ್ಮೋದ್ಧಾರ ಬಯಸುವವರು ಯಾರೇ ಆಗಿರಲಿ ಇಷ್ಟಲಿಂಗ ಯೋಗದ ಮೊರೆ ಹೋಗಬೇಕು ಎಂದು ನುಡಿದರು.
ಪೂಜ್ಯಶ್ರೀ ಸುಗುಣತಾಯಿ ಮುಖ್ಯ ಅನುಭಾವ ನೀಡಿ, ಮನುಷ್ಯನ ನಿಜವಾದ ಸಂಪತ್ತು ಜ್ಞಾನ. ಜ್ಞಾನ ಎಲ್ಲಕ್ಕಿಂತ ಹಿರಿದು ಇದನ್ನು ಯಾರು ಬೆಲೆ ಕಟ್ಟಲಾರರು ಇಷ್ಟಲಿಂಗಯೋಗ ಸಾಧನೆಯಿಂದ ಜಿವನದ ನಿಜವಾದ ಅರ್ಥ ತಿಳಿದುಕೊಳ್ಳಬಹುದು ಎಂದರು.
ವಿಜಯಪುರದ ಪೂಜ್ಯ ಚಂದ್ರಕಲಾತಾಯಿ, ಪೂಜ್ಯ ಅನ್ನಪೂರ್ಣತಾಯಿ, ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ಮಾತೆ ಕಲ್ಯಾಣಮ್ಮ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕರಾದ ಸುಭಾಷ ಹೊಳಕುಂದೆ, ಅಶೋಕ ನಾಗರಾಳೆ, ಹಿರಿಯ ನಾಗರಿಕರ ಒಕ್ಕೂಟದ ಕಾರ್ಯದರ್ಶಿ ಶಂಕರ ಕರಣೆ ಲಿಂಗರಾಜ ಶಾಶೆಟ್ಟಿ, ಸಿದ್ದು ಬಿರಾದಾರ, ಸಂತೋಷ ಮಡಿವಾಳ ಅಕ್ಕನ ಬಳಗದ ಅಧ್ಯಕ್ಷೆ ಸುಲೋಚನಾ ಮಾಮಾ, ಸೋನಾಲಿ ನೀಲಕಂಠೆ, ಜಯಶ್ರೀ ಬಿರಾದಾರ, ಕವಿತಾ ರಾಜೋಳೆ, ಸೇರಿದಂತೆ ಮಹಾಶಕ್ತಿಕೂಟಗಳ ಬಳಗದವರು ಪಾಲ್ಗೊಂಡಿದ್ದರು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು ಸಂಗಮೇಶ ತೊಗರಖೇಡೆ ನಿರೂಪಿಸಿದರು.