ಕೋಲಾರ,ಏ,೫- ಇಂದು ಮಹಾವೀರ ಜಯಂತಿ ಪ್ರಯುಕ್ತ ಕೋಲಾರದ ಅಮ್ಮವಾರಿ ಪೇಟೆಯಲ್ಲಿರುವ ಜೈನ್ ಮಂದಿರದಲ್ಲಿ ಕೋಲಾರ ಕ್ರೀಡಾ ಸಂಘ ಮತ್ತು ಜೈನ್ ಸಮುದಾಯದ ವತಿಯಿಂದ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿರುವ ಮಕ್ಕಳಿಗೆ ಭಗವಾನ್ ಮಹಾವೀರರ ದರ್ಶನ ಮತ್ತು ಅವರ ಭೋಧನೆಗಳ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜೈನ್ ಸಮುದಾಯದ ಮುಖಂಡರಾದ ಧೀರಜ್ ಮತ್ತು ಅಮಿತ್ ರವರು ಮಕ್ಕಳಿಗೆ ಭಗವಾನ್ ಮಹಾವೀರರ ಭೋಧನೆಗಳ ಬಗ್ಗೆ ಪರಿಚಯ ನೀಡಿದರು.
ಈ ಸಂಧರ್ಭದಲ್ಲಿ ಜೈನ ಧರ್ಮದ ಉಗಮ, ತೀರ್ಥಂಕರರ ಪರಿಚಯವನ್ನು ನೀಡಲಾಯಿತು. ಭಗವಾನರ ಪಂಚ ತತ್ವಗಳಾದ ಅಹಿಂಸೆ, ಸತ್ಯ, ಆಸ್ಥೇಯ, ಬ್ರಹ್ಮಚರ್ಯ ಮತ್ತು ಅಪರಿಗೃಹಗಳ ಬಗ್ಗೆ ಅಮಿತ್ ರವರು ವಿವರಿಸಿದರು. ಈ ಸಂಧರ್ಭದಲ್ಲಿ ಮಕ್ಕಳೂ ಸಹ ಮಹಾವೀರರ ಮತ್ತು ಜೈನಧರ್ಮದ ಬಗ್ಗೆ ತಿಳಿದುಕೊಂಡರು.
ಸದರಿ ಕಾರ್ಯಕ್ರಮದಲ್ಲಿ ಧೀರಜ್, ಅಮಿತ್, ಸುನೀಲ್ ಸೇರಿದಂತೆ ಜೈನ್ ಸಮುದಾಯದ ಹಲವು ಮುಖಂಡರು ಭಾಗವಹಿಸಿದ್ದರು. ಕೋಲಾರ ಕ್ರೀಡಾ ಸಂಘದ ತರಬೇತುದಾರರಾದ ಕೃಷ್ಣಮೂರ್ತಿ, ಸುರೇಶ್ ಬಾಬು, ಹಿರಿಯ ತರಬೇತುದಾರ ಮತ್ತು ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು ೧೮೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.