ಮಹಾಲಬಾಗಾತಯತ ಕೈಗಾರಿಕಾ ಪ್ರದೇಶಗಳ ಕಾಮಗಾರಿ: ಮೂರನೇ ಪಕ್ಷದಿಂದ ಗುಣಮಟ್ಟದ ಪರಿಶೀಲನೆಗೆ ಸೂಚನೆ

ವಿಜಯಪುರ ಡಿ.29: ಜಿಲ್ಲೆಯ ಮಹಾಲಬಾಗಾಯತ, ಅಲಿಯಾಬಾದ ಹಂತ -1 ಮತ್ತು 2 ರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಉನ್ನತೀಕರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಕಾಮಗಾರಿಗಳ ಬಗ್ಗೆ ಮೂರನೇ ಪಕ್ಷದಿಂದ ಗುಣಮಟ್ಟತೆ ಪರಿಶೀಲಿಸಿ, ಖಾತ್ರಿ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಹಾಲಬಾಗಾಯತ, ಅಲಿಯಾಬಾದ ಹಂತ-1 ಮತ್ತು 2 ರ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈ ಕಾಮಗಾರಿಗಳ ಗುಣಮಟ್ಟತೆ ಕುರಿತು ಮೂರನೇ ಪಕ್ಷದಿಂದ ಖಾತ್ರಿ ಪಡಿಸಿಕೊಂಡು ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದರು.
ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ ಮೊದಲನೇ ಹಂತದ 564 ಎಕರೆ ಜಮೀನಿನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಸೇತುವೆ ಹಾಗೂ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ಅತ್ಯುತ್ತಮವಾಗಿ ಪೂರ್ಣಗೊಳಿಸಿದ್ದು, ಇನ್ನುಳಿದ ಸಿವಿಲ್ ಕಾಮಗಾರಿಗಳನ್ನು ಎಪ್ರೀಲ್ ಅಂತ್ಯರೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದಿನ ಸಭೆಯಲ್ಲಿ ವಿಜಯಪುರ ತಾಲೂಕಿನ ಕಾಖಂಡಕಿಯ ಸಾವಯವ ಬೆಲ್ಲ ತಯಾರಿಕಾ ಘಟಕಕ್ಕೆ ಅನುಮೋದನೆ ದೊರೆತಿದ್ದು, ಇದರಿಂದ ಉದ್ಯೋಗಗಳಿಗೂ ಸಹಕಾರಿಯಾಗುತ್ತದೆ. ಅಲ್ಲದೇ ಇದರಿಂದ ಸಾವಯವ ಬೆಲ್ಲ ತಯಾರಿಕೆಗೂ ಬಹಳ ಅನುಕೂಲವಾಗಲಿದೆ ಎಂದು ಅವರು ಸಭೆಗೆ ತಿಳಿಸಿದರು.
ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಟಿ.ಸಿದ್ಧಣ್ಣ ಅವರು ವಿಜಯಪುರದ ಅಲಿಯಾಬಾದ-2 ರಲ್ಲಿ ರಸ್ತೆ ಬದಿ ಅನಧಿಕೃತವಾಗಿ ತಲೆ ಎತ್ತಿರುವ ಗೂಡಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಗಳ ಅಧಿಕಾರಿಗಳಿಂದ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಮುದ್ದೇಬಿಹಾಳದಲ್ಲಿ ಹೊಸ ಕೈಗಾರಿಕಾ ವಸಾಹತುವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೆ.ಎಸ್.ಎಸ್.ಐ.ಡಿ.ಸಿ ಗೆ 15 ಎಕರೆ ಜಾಗವನ್ನು ಗುರುತಿಸಿ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಮುದ್ದೇಬಿಹಾಳ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.