ಉಚಿತ ಬಸ್ ಯೋಜನೆಗೆ ರೇವಂತ್ ಚಾಲನೆ

ಹೈದ್ರಾಬಾದ್,ಡಿ.೯:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ರೆಡ್ಡಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಹಾಲಕ್ಷ್ಮಿ ಯೋಜನೆಗೆ ಇಂದು ವಿಧ್ಯುಕ್ತ ಚಾಲನೆ ನೀಡಿದ್ದಾರೆ.ನಾರಿಯರಿಗೆ ಉಚಿತ ಬಸ್ ಪ್ರಯಾಣದ ಜತೆಗೆ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಭರವಸೆ ನೀಡಿತ್ತು.
ಈ ಭರವಸೆಯಂತೆ ೬ ಗ್ಯಾರಂಟಿಗಳಿಗೆ ಅಂಕಿತ ಹಾಕುವ ಮೂಲಕ ರೆವಂತ್‌ರೆಡ್ಡಿ ಇಂದು ಚಾಲನೆ ನೀಡಿದ್ದಾರೆ. ಸೆ. ೧೮ ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿತ್ತು. ಈ ಯೋಜನೆಯಂತೆ ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ಯೋಜನೆ ಜಾರಿಯಿಂದಾಗಿ ತೆಲಂಗಾಣ ರಾಜ್ಯದ ಗಡಿಯೊಳಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪಲ್ಲೆವೆಲಗು ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಯುವತಿಯರು ಎಲ್ಲ ವಯೋಮಾನದ ಮಹಿಳೆಯರು, ತೃತೀಯ ಲಿಂಗಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.ಮಹಿಳಾ ಪ್ರಯಾಣಿಕರು ಪ್ರಯಾಣಿಸುವ ದೂರದ ಆಧಾರದ ಮೇಲೆ ಸರ್ಕಾರ ಟಿಎಸ್‌ಆರ್‌ಟಿಸಿ ಶುಲ್ಕವನ್ನು ಮರು ಪಾವತಿ ಮಾಡಲಿದೆ ಎಂದು ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.ಸಾಫ್ಟ್‌ಸವೇರ್ ಆಧಾರಿತ ಮಹಾಲಕ್ಷ್ಮಿ ಸ್ಮಾರ್ಟ್‌ಕಾರ್ಡ್ ನೀಡುವ ಕೆಲಸವನ್ನು ಆರಂಭಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.ಕರ್ನಾಟಕ ಮಾದರಿಯಲ್ಲೇ ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿ ತೆಲಂಗಾಣ ನೂತನ ರಚನೆಯಾದ ನಂತರ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.