ಮಹಾರಾಷ್ಟ್ರ ಸರ್ಕಾರದ ವಾಹನಗಳಿಗೆ ಘೇರಾವ್: ಜೆ.ಎಂ ಕೊರಬು

ಅಫಜಲಪುರ:ಮಾ.19: ನಮ್ಮ ಹಕ್ಕಿನ ನೀರನ್ನು ನಮಗೆ ಭೀಮಾ ನದಿಗೆ ಹರಿಸದೆ ಇದ್ದರೆ ಮಹಾರಾಷ್ಟ್ರ ಸರ್ಕಾರದಿಂದ ನಮ್ಮ ಭಾಗಕ್ಕೆ ಬರುವ ಎಲ್ಲಾ ಸರ್ಕಾರಿ ಬಸ್ಸು ಮತ್ತು ವಾಹನಗಳು, ವ್ಯಾಪಾರ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಓಡಾಟ ಮಾಡುವ ಸರಕು ಸಾಗಾಟ ವಾಹನಗಳಿಗೆ ಘೇರಾವ್ ಹಾಕಿ ಬಂದ್ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರಬು ಎಚ್ಚರಿಕೆ ನೀಡಿದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಯುವ ಮುಖಂಡ ಶಿವಕುಮಾರ್ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಕಾವೇರಿ ನೀರು ತಮಿಳುನಾಡಿಗೆ ಹರಿಸದಿದ್ದರೆ ಸುಪ್ರೀಂಕೋರ್ಟ್ ಮಾತನಾಡುತ್ತದೆ. ಆದರೆ ಭೀಮಾ ನದಿಗೆ ಬರಬೇಕಾದ ನೀರು ಬರದೆ ಇದ್ದರೆ ಯಾರೊಬ್ಬರೂ ಮಾತನಾಡುವುದಿಲ್ಲ. ಹೀಗಾಗಿ ಇದು ಸರಿಯಾದ ಕ್ರಮವಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ಈ ಸಮಸ್ಯೆಯ ಇತ್ಯರ್ಥಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ನಾನು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉಜನಿ ಜಲಾಶಯದಿಂದ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಮುಖ್ಯವಾಗಿ ಭೀಮಾ ನದಿಯ ರೈತರಿಗೋಸ್ಕರ ಹಮ್ಮಿಕೊಂಡ ಈ ಧರಣಿ ಸತ್ಯಾಗ್ರಹಕ್ಕೆ ನಾಳೆ ಬುಧವಾರದಂದು ಪಟ್ಟಣದ ಸಾರ್ವಜನಿಕ ವ್ಯಾಪಾರಸ್ಥರು, ಉದ್ದಿಮೆದಾರರು, ವರ್ತಕರ ಸಂಘದ ಮುಖ್ಯಸ್ಥರು, ವಾಹನ ಚಾಲಕರು, ಔಷದ ಮಳಿಗೆ ವ್ಯಾಪಾರಸ್ಥರು, ಆಟೋಮೊಬೈಲ್ಸ್ ಅಂಗಡಿ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳ ಮುಖ್ಯಸ್ಥರು ವಿವಿಧ ಸಮುದಾಯಗಳ ಮುಖಂಡರು ಸ್ವಯಂಪ್ರೇರಿತ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು ನಾವು ಕೂಡ ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಮಲ್ಲಿಕಾರ್ಜುನ ನಿಂಗದಳ್ಳಿ, ಬಸಣ್ಣ ಗುಣಾರಿ, ಧಾನು ಪತಾಟೆ, ಶಿವು ಕಣ್ಣಿ, ದಯಾನಂದ ಪಾಟೀಲ, ಬೈಲಪ್ಪ ಗೌಡ, ಪ್ರಭಾವತಿ ಮೇತ್ರಿ, ಶರಣಯ್ಯ ಮಠಪತಿ ಸೇರಿದಂತೆ ಅನೇಕರಿದ್ದರು.