ಮಹಾರಾಷ್ಟ್ರ ಸರಕಾರ ತನ್ನ ಗಡಿಗಳನ್ನು ಎಲ್ಲಾ ರೀತಿಯಿಂದಲೂ ಸುಭಿಕ್ಷೆಗೊಳಿಸಿದೆ: ಬೈಚಬಾಳ

ವಿಜಯಪುರ, ಮಾ.30-ಇಂದಿನ ಪರಿಸ್ಥಿತಿಯ ಮಟ್ಟಿಗೆ ಗಡಿ ಸಮಸ್ಯೆ ಎಂದರೆ ನಾವು ಕಳೆದುಕೊಳ್ಳುವುದೇ ಹೊರತು ಗಳಿಸುವುದಾಗುತ್ತಿಲ್ಲ. ಯಾಕೆಂದರೆ ಮಹಾರಾಷ್ಟ್ರ ಸರಕಾರ ತನ್ನ ಗಡಿಗಳನ್ನು ಎಲ್ಲಾ ರೀತಿಯಿಂದಲೂ ಸುಭಿಕ್ಷೆಗೊಳಿಸಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ರೇಖೆಯ ಮೇಲೆ ನಿಂತು ನಾವೊಮ್ಮೆ ಎರಡು ಕಡೆ ನೋಡಬೇಕು. ವೈಪರಿತ್ಯಗಳ ಎರಡು ಆಯಾಮಗಳೇ ನಮ್ಮೆದುರಿಗೆ ಕಾಣುತ್ತವೆ. ಫ್ಯಾಕ್ಟರಿಗಳು, ಮಿಲ್‍ಗಳು, ತೋಟದ ಮನೆಗಳು, ಸಸ್ಯಶಾಮಲೆ, ನಳನಳಿಸುವ ರಸ್ತೆಗಳು ಆ ಕಡೆ. ಆದರೆ ರಣಬಿಸಿಲಿಗೆ ಗೆಣುದ್ದುದ ಒಣಹುಲ್ಲು, ಎಂದೂ ಕಾರ್ಯಾರಂಭ ಮಾಡದ, ತನ್ನ ತಲೆಯ ಮೇಲೆ ತಗಡು ಹಾಸಿನ ಗಾಳಿಗೆ ಹಾರಿದ ಸೂರಿನ ಬತ್ತಲೆ ನಿಂತ ಕಟ್ಟಡಗಳು. ಅತ್ತ ಝಗಝಗ ಇತ್ತ ಬಗಬಗ ಎಂದು ಸಾಹಿತಿ ಶಂಕರ ಬೈಚಬಾಳ ಗಡಿನಾಡಿನ ಸ್ಥಿತಿಯನ್ನು ಕುರಿತು ಹೇಳಿದ್ದು ಹೀಗೆ.
ಅವರು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯ ಶ್ರೀ ಸದ್ಗುರು ಬಸವಾರೂಢ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವುಗಳ ಸಹಯೋಗದಲ್ಲಿದಿನಾಂಕ 27-3-2021 ರಂದು ಕಾಲೇಜಿನ ಆವರಣದಲ್ಲಿ ‘ಗಡಿ ಅಳಿದರೆ ನಾಡು ಉಳಿಯದು’ ಎಂಬ ವಿಚಾರ ಸಂಕಿರಣದಲ್ಲಿ ‘ಗಡಿನಾಡ ಸಮಸ್ಯೆಗಳು ಮತ್ತು ಪರಿಹಾರ’ ವಿಷಯ ಕುರಿತು ಉಪನ್ಯಾಸ ನೀಡಿದರು. ಮುಂದುವರೆದು ಮಾತನಾಡುತ್ತ ಗಡಿಯಲ್ಲಿರುವ ಜನಪದ ಸಂಪ್ರದಾಯ, ಹಾಡು, ಕುಣಿತ, ಕಥನಗೀತೆಗಳಿರುವ ವರೆಗೂ ಅಲ್ಲಿ ಕನ್ನಡ ಜೀವಂತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಸ.ಚಿ. ರಮೇಶರವರು ಮಾತನಾಡುತ್ತ, ನಾವು ಎದುರಿಸುತ್ತಿರುವ ಅಂತರರಾಜ್ಯ ಗಡಿಸಮಸ್ಯೆ ರಾಜಕೀಯ, ಭೌಗೋಳಿಕ ಹೊರತಾಗಿಯೂ ಅನೇಕ ಎಡರುತೊಡರು ಎದುರಿಸುತ್ತದೆ. ಇವುಗಳಿಗೆ ಪರಿಹಾರ ಎಂದರೆ ಹೃದಯದಿಂದ ಕನ್ನಡವನ್ನು ಪ್ರೀತಿಸಬೇಕು. ಇಚ್ಚಾಶಕ್ತಿ ಹೊಂದಬೇಕು. ಗಡಿಯಲ್ಲಿನ ಜನಪದ ರಶ್ಮಿಗಳನ್ನು ಕ್ರಿಯಾತ್ಮಕವಾಗಿ ಪುನರ್‍ಕಟ್ಟಬೇಕು. ಅಂತಹ ಸಂಪ್ರದಾಯಗಳ ಪ್ರಕಟಣೆಯಲ್ಲಿ ವಿಶ್ವವಿದ್ಯಾಲಯದ ಪ್ರಸಾರಾಂಗ ಸಹಕರಿಸುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಇನ್ನೊಬ್ಬ ಉಪನ್ಯಾಸಕರು ಸಿದ್ರಾಮ ಬಿರಾದಾರ ಅವರು ಕನ್ನಡ ನಾಡಿನ ಗಡಿಯಲ್ಲಿ ಕನ್ನಡ ಶಾಲೆಗಳ ಸ್ಥಿತಿ ಅಲ್ಲೊಲಕಲ್ಲೊಲವಾಗಿದೆ. ಇತ್ತಿತ್ತಲಾಗಿ ಕನ್ನಡ ಶಾಲೆಗಳು ಮುಚ್ಚುತ್ತಲಿವೆ. ಅಲ್ಲಿನ ಕನ್ನಡಿಗರ ಹಿತಾಶಕ್ತಿ ಕಾಪಾಡಿ, ಕನ್ನಡ ಸಂಸ್ಕøತಿಗೆ ಇಂಬು ಕೊಡುವಂತಹ ಯೋಜನೆಗಳು ಇನ್ನೂ ಹೆಚ್ಚುಹೆಚ್ಚಾಗಿ ಬರಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸದ್ಗುರು ಸಿದ್ದಾರೂಢ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಧರ್ಮರಾಜ ಚಂ. ನಾಟೀಕಾರ ವಹಿಸಿ ಮಾತನಾಡುತ್ತ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉಚಿತ, ವಸತಿ ಹಾಗೂ ವಿದ್ಯಾರ್ಜನೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಸ್.ಆರ್. ಮಠ, ಬಿ.ಎಸ್. ಪಾಟೀಲ್, ಸಿ.ಎ. ಚಾಂದಕವಟೆ, ಬಸವರಾಜ ಸಾಲವಡಗಿ, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಮಾರಂಭದಲ್ಲಿ ಮಹಾರಾಷ್ಟ್ರದ ಪಠ್ಯಪುಸ್ತಕದಲ್ಲಿ ಕವಿ ಸಿದ್ರಾಮ ಬಿರಾದಾರ ಅವರ ಕನ್ನಡ ಕವನ ಪಠ್ಯವಾಗಿ ಆಯ್ಕೆಯಾದುದಕ್ಕೆ ಕವಿಗಳನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಡಾ. ಸಿದ್ದಣ್ಣ ಉತ್ನಾಳ ಪ್ರಾಸ್ತಾವಿಕ ಮಾತನಾಡಿದರು. ಡಿ.ಟಿ. ಕರಡಿ ಸ್ವಾಗತಿಸಿದರು. ಪ್ರಕಾಶ ಪಾಟೀಲ್ ನಿರೂಪಿಸಿದರು. ಬಿ.ಕೆ. ಪತ್ತಾರ ವಂದಿಸಿದರು.