ಮಹಾರಾಷ್ಟ್ರ, ರಾಜ್ಯದ ಗಡಿ ಭಾಗದಲ್ಲಿ ಮಳೆ ಬಸವ ನಾಡಿನಲ್ಲಿ ತುಂಬಿ ಹರಿಯುತ್ತಿರುವ ಡೋಣಿ ನದಿ

ವಿಜಯಪುರ, ಜೂ.4-ಮಹಾರಾಷ್ಟ್ರ ಮತ್ತು ವಿಜಯಪುರ ಜಿಲ್ಲೆಯಾದ್ಯಂತ ಅಲ್ಲಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಧ ಅಲ್ಲಲ್ಲಿ ಉತ್ತಮ ಮಳೆಯಿಂದಾಗಿ ಡೋಣಿ ನದಿ ತುಂಬಿ ಹರಿಯುತ್ತಿದೆ.
ಡೋಣಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಹಲವಾರು ಕಡೆಗಳಲ್ಲಿ ರೈತರ ಹೊಲಗಳಿಗೆ ನೀರು ನುಗಿದೆ. ನಿನ್ನೆ ಸಂಜೆಯಿಂದ ಆರಂಭವಾದ ಮಳೆ ಬೆಳಿಗ್ಗೆವರೆಗೂ ಸುರಿದಿದೆ. ಈ ಮಳೆಯ ನೀರು ಡೋಣಿ ನದಿಯ ಮೂಲಕ ರೈತರ ಹೊಲಗಳಿಗೆ ನುಗ್ಗಿದೆ. ಈ ವರ್ಷದ ಮೊದಲ ಮುಂಗಾರು ಮಳೆಗೆ ಡೋಣಿ ನದಿ ತುಂಬಿ ಹರಿಯುತ್ತಿದೆ. ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ಡೋಣಿ ನದಿ ನೀರು ರೈತರ ಜಮೀನುಗಳಿಗೆ ನುಗ್ಗಿದೆ.
ನದಿಯಲ್ಲಿ ಹೂಳು ತುಂಬಿರುವ ಕಾರಣ ಪ್ರತಿಬಾರಿ ಮಳೆ ಸುರಿದಾಗ ಈ ಡೋಣಿ ನದಿ ಉಕ್ಕಿ ಹರಿಯುವುದು ಮಾಮೂಲಾಗಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನಲ್ಲಿ ಹುಟ್ಟುವ ಈ ನದಿ ವಿಜಯಪುರ ಜಿಲ್ಲೆಯ ಹೊನವಾಡ ಮೂಲಕ ಕರ್ನಾಟಕವನ್ನು ಪ್ರವೇಶಿಸುತ್ತದೆ. ವಿಜಯಪುರ ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನ ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ ತಾಲೂಕುಗಳಲ್ಲಿ ಹರಿಯುತ್ತದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ತುಂಬಿ ಹರಿಯುತ್ತಿರುವ ಡೋಣಿ ನದಿ
ಈ ನದಿಯಲ್ಲಿ ಸಂಪೂರ್ಣ ಹೂಳು ತುಂಬಿರುವ ಪರಿಣಾಮ, ಡೋಣಿ ನದಿ ಮಳೆ ಬಂತೆಂದರೆ ಸಾಕು ತನ್ನ ನದಿ ಪಾತ್ರ ಬದಲಾಯಿಸಿ ಬೇರೆ ಬೇರೆ ಹೊಸ ಹೊಸ ಜಮೀನುಗಳಿಗೆ ಮತ್ತು ಹಲವಾರು ಬಾರಿ ನದಿ ತೀರದ ಗ್ರಾಮಗಳಿಗೂ ನುಗ್ಗಿ ಅಪಾರ ಹಾನಿ ಮಾಡುತ್ತಿದೆ ಎಂದು ಸಾರವಾಡ ಗ್ರಾಮದ ಮಲ್ಲಿಕಾರ್ಜುನ ಬಟಗಿ ತಿಳಿಸಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ಭಾಗದಲ್ಲಿ ಆಗಾಗ ಡೋಣಿ ನದಿ ತುಂಬಿ ಹರಿಯುವುದು ಮತ್ತು ರೈತರ ಹೊಲಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ.