ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹಿಸಿ ಮನವಿ

ವಿಜಯಪುರ, ಮಾ.31-ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಕನ್ನಡ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಕರ್ನಾಟಕ ಸರ್ಕಾರ ತನ್ನ ರಾಜ್ಯದ ಗಡಿಯಲ್ಲಿರುವ ಬೆಳಗಾವಿ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ ಮಾದರಿಯಲ್ಲಿ ಮರಾಠಾ ನಿಗಮ ಸ್ಥಾಪನೆ ಮಾಡಿರುವ ಕರ್ನಾಟಕ ಸರ್ಕಾರದಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ತೀವ್ರಗತಿಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮುಂಬೈ ಮಹಾನಗರದ ಅಂಬರನಾಥ, ಡೊಂಬಿವಲಿ, ಠಾಣೆ, ವಾರ್ಸಿ, ಅಂದೇರಿ, ಪನವೆಲ್, ಬಾಂದ್ರಾನಗರ, ಗೊರೆಗಾಂವ, ಬೋರಿವಲಿ, ಮಲ್ಲಾಡ, ನವಿಮುಂಬೈ, ಕೋಲಾಪುರ, ಸೋಲಾಪುರ ಮಹಾರಾಷ್ಟ್ರ ರಾಜ್ಯದ ಮೂಲೆ ಮೂಲೆಗಳಲ್ಲಿ ಕರ್ನಾಟಕದ ಕನ್ನಡಿಗರು ವಾಸಿಸುತ್ತಿದ್ದಾರೆ. ಕರ್ನಾಟಕದಿಂದ ಗುಳೆ ಹೋಗಿ ಆರ್ಥಿಕ ಭದ್ರತೆಗಾಗಿ ಹಗಲಿರುಳು ದುಡಿದರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ತಾರತಮ್ಯ ಧೋರಣೆಯಿಂದ ಅಲ್ಲಿನ ಕನ್ನಡಿಗರು ಉದ್ಯೋಗ ಶಿಕ್ಷಣದಲ್ಲಿ ಅನ್ಯಾಯಕ್ಕೊಳಗಾಗಿದ್ದಾರೆ. ಮಹಾರಾಷ್ಟ್ರದ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕನ್ನಡಿಗರ ಬದುಕು ಚಿಂತಾಜನಕ ಸ್ಥಿತಿಯಲ್ಲಿದೆ. ಭಾಷಾವಾರು ಪ್ರಾಂಥಗಳಾದರೂ ಭಾವೈಕ್ಯತೆಯಿಂದ ಬದುಕು ಸಾಗಿಸುತ್ತಿರುವರು. ಕರ್ನಾಟಕ ಸರ್ಕಾರ 20 ವರ್ಷಗಳ ಹಿಂದೆನೆ ಮರಾಠಾ ನಿಗಮ ಸ್ಥಾಪಿತವಾಗಬೇಕಿತ್ತು. 20 ವರ್ಷಗಳ ನಂತರ ನಿಗಮವಾಗಿದ್ದು ಮರಾಠಿಗರ ಅಂದು ದುರ್ದೈವದ ಸಂಗತಿಯಾಗಿತ್ತು. ಇಂದು ನಿಗಮ ಸ್ಥಾಪಿತಗೊಂಡು ಸುದೈವಿಗಳಾಗಿದ್ದಾರೆ. 40 ವರ್ಷಗಳ ಹಿಂದೆ ಕನ್ನಡ ಅಭಿವೃಧ್ದಿ ನಿಗಮ ಮಹಾರಾಷ್ಟ್ರದಲ್ಲಿ ಸ್ಥಾಪಿತವಾಗಬೇಕಿತ್ತು. ಭಾಷಾವಾರು ಸಂಖ್ಯೆ ಆಧಾರದ ಮೇಲೆ ಸ್ಥಾಪಿತವಾಗಬೇಕಿದ್ದ ಕನ್ನಡ ಅಭಿವೃದ್ಧಿ ನಿಗಮವು ದುರ್ದೈವಶಾತ್ ಇಂದಿಗೂ ಕನ್ನಡ ಅಭಿವೃದ್ಧಿ ನಿಗಮವು ಸ್ಥಾಪಿತಗೊಳ್ಳದೇ ಇರುವುದು ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡು ಮಹರಾಷ್ಟ್ರ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವುದು ಸಂವಿಧಾನ ಬದ್ಧ ಅಪರಾಧವಾಗಿದೆ. ತೀವ್ರಗತಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಕನ್ನಡಿಗರ ಸಮೀಕ್ಷೆ ಮಾಡಿ ಕೂಡಲೇ ಅವರ ಹಕ್ಕನ್ನು ಅವರಿಗೆ ದೊರಕಿಸಿ ಕನ್ನಡ ಅಭಿವೃದ್ಧಿ ನಿಗಮವನ್ನು ಕೂಡಲೇ ಸ್ಥಾಪಿಸಬೇಕೆಂದರು.
ಕರವೆ ಜಿಲ್ಲಾ ಗೌರವಾಧ್ಯಕ್ಷ ವಸಂತರಾವ ಕೊರ್ತಿ ಮಾತನಾಡಿ, ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮರಾಠಾ ಅಭಿವೃದ್ಧಿ ನಿಗಮದಿಂದ ಕರ್ನಾಟಕ ರಕ್ಷಣಾ ವೇದಿಕೆ ಅಂದು ಸ್ವಾಗತವನ್ನು ಕೋರಿದ್ದೇವೆ. ಇಂದು ಮಹಾರಾಷ್ಟ್ರ ಸರ್ಕಾರ ಕೂಡಲೇ ಕನ್ನಡ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸಂಕಷ್ಟದಲ್ಲಿರುವ ಕನ್ನಡಿಗರ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಅವರ ಹಕ್ಕುಗಳನ್ನು ಅವರಿಗೆ ನೀಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಜಿಲ್ಲಾ ಸಂಚಾಲಕ ಗುರುರಾಜ ಪಂಚಾಳ, ಭೀಮಾಶಂಕರಯ್ಯ ವಿರಕ್ತಮಠ, ವಸಂತರಾವ ಕುಲಕರ್ಣಿ, ಎಮ್.ಪಿ. ಸುಲ್ತಾನಪುರ, ಭೀಮಪ್ಪ ಬಶೆಟ್ಟಿ, ಯುಸುಫ್ ಗುಲಬರ್ಗಾ, ಹಣಮಂತ ಲಕ್ಷಾನಟ್ಟಿ, ಸಲೀಂ ಮಮದಾಪುರ, ಬಾಬು ಲಮಾಣಿ, ಅಶೋಕ ನಂದ್ಯಾಳ, ಎಮ್.ಎಸ್. ಜಹಾಗೀರದಾರ, ಲಾಲಸಾಬ ಚಟ್ಟರಕಿ, ಆನಂದ ಸಾಗರ, ಶ್ರೀಕಾಂತ ಸುಶಿಲಾದಿ, ಪ್ರಕಾಶ ನಡುವಿನಕೇರಿ, ಜೆ.ಎಸ್. ಜಹಾಗೀರದಾರ, ಪ್ರೇಮಾ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.