ಮಹಾರಾಷ್ಟ್ರ ಮೇಲ್ಮನೆಗೆ ನಟಿ ಊರ್ಮಿಳಾ

ಮುಂಬೈ, ಅ ೩೧- ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯ ವಿಧಾನ ಪರಿಷತ್ತಿಗೆ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಮೇಲ್ಮನೆಗೆ ರಾಜ್ಯಪಾಲರು ನಾಮನಿರ್ದೇಶನ ಮಾಡುವ ೧೨ ಅಭ್ಯರ್ಥಿಗಳ ಪೈಕಿ ಊರ್ಮಿಳಾ ಮಾತೋಂಡ್ಕರ್ ಅವರ ಹೆಸರು ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಮಹಾರಾಷ್ಟ್ರ ರಾಜಕೀಯ ವಲಯದಿಂದ ಬಲವಾಗಿ ಕೇಳಿಬರುತ್ತಿದೆ.
ನಟಿ ಊರ್ಮಿಳಾ ಮಾತೋಂಡ್ಕರ್ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡುವ ಕುರಿತು ಸ್ಪಷ್ಟೀಕರಣ ನೀಡಿರುವ ಶಿವಸೇನೆ ವಕ್ತಾರರೂ ಆದ ಸಂಜಯ್ ರೌತ್, “ನಟಿ ಊರ್ಮಿಳಾ ಅವರನ್ನು ಪರಿಷತ್ಗೆ ನಾಮ ನಿದೇರ್ಶನ ಮಾಡುವ ಊಹಾಪೋಹಗಳು ಕೇಳಿ ಬರುತ್ತಿವೆ. ಆದರೆ, ಯಾರನ್ನೂ ಮೇಲ್ಮನೆಗೆ ಆಯ್ಕೆ ಮಾಡಬೇಕು? ಯಾರಿಗೆ ಅವಕಾಶ ನೀಡಬೇಕು? ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಇಡೀ ಪಕ್ಷ ಬೆಂಬಲ ನೀಡಲಿದೆ” ಎಂದಿದ್ದಾರೆ.
೪೬ ವರ್ಷದ ಉರ್ಮಿಲಾ ಮಾತೋಂಡ್ಕರ್ ಅವರು ಕಳೆದ ವರ್ಷ ಮುಂಬೈ ಉತ್ತರ ಕ್ಷೇತ್ರದದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಸೋಲಿನಿಂದ ನಿರಾಶೆಗೆ ಒಳಗಾದ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಅಧಿಕವಾಗಿದೆ, ಪಕ್ಷದ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡುತ್ತಾರೆ ಎಂದು ಆರೋಪಿಸಿ ಪಕ್ಷ ತೊರೆದಿದ್ದರು. ಅಲ್ಲದೆ, ಶಿವಸೇನೆಗೆ ಸೇರ್ಪಡೆಯಾಗಿದ್ದರು.
ಸಾಹಿತ್ಯ, ಕಲೆ, ವಿಜ್ಞಾನ, ಸಹಕಾರಿ ಆಂದೋಲನ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಿಂದ ೧೨ ಸದಸ್ಯರನ್ನು ಶಾಸಕಾಂಗ ಮಂಡಳಿಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರು ಸಂವಿಧಾನದಿಂದ ಆದೇಶಿಸಿದ್ದಾರೆ.