ಮಹಾರಾಷ್ಟ್ರ: ನ.16 ರಿಂದ ಧಾರ್ಮಿಕ ಕೇಂದ್ರ ಪುನರಾರಂಭ

ಮುಂಬೈ,ನ.14- ಮಹಾರಾಷ್ಟ್ರದಲ್ಲಿ ಕೋರೋನಾ ಸೋಂಕಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳ ಬಾಗಿಲು ಬಂದ್ ಮಾಡಲಾಗಿತ್ತು.ಇದೀಗ ನವಂಬರ್ 16ರಿಂದ ಪುನಾರಾರಂಭಕ್ಕೆ ದಿನಾಂಕ‌ ನಿಗಧಿ ಮಾಡಲಾಗಿದೆ.

ದೇವಾಲಯಗಳಿಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರಕ್ಕೆ ಒತ್ತು ನೀಡಬೇಕು ಎನ್ನುವ ಕಟ್ಟುನಿಟ್ಟಿನ ಷರತ್ತನ್ನು ಮಹಾರಾಷ್ಟ್ರ ಸರ್ಕಾರ ವಿಧಿಸಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಪರೆನ್ಸ್ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನವಂಬರ್ 16ರಿಂದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಪ್ರಾರಂಭ ಮಾಡುತ್ತಿದ್ದು ಜನರು ಸೋಂಕಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮನವಿ ಮಾಡಿದ್ದಾರೆ.

ಮುಖಗವಸು ಹಾಕುವುದು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವುದು ಬೇಡ ಎಂದು ಜನರಿಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ ಹೀಗಾಗಿ ಜನರು ಮಾಡದೆ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಯಾರು ಹೊರ ಹೋಗಬೇಡಿ ಮನೆಯಲ್ಲಿ ಕುಟುಂಬದ ಜೊತೆ ಹಬ್ಬವನ್ನು ಆಚರಿಸಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ

ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್ ಮಾತನಾಡಿ ದೇವಾಲಯಕ್ಕೆ ಸೇರಿದಂತೆ ಇನ್ನಿತರ ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತಾದಿಗಳಿಗೆ ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್, ಜೊತೆಗಿಟ್ಟು ಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.