ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ನಿಯಮ ಕಟ್ಟುನಿಟ್ಟಾಗಿ ಜಾರಿ

ಮುಂಬೈ,ಮಾ.೨೮- ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ತಡೆಗೆ ಮಹಾರಾಷ್ಟ್ರ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹೇರಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್-೧೯ ನಿಯಂತ್ರಣಕ್ಕೆ ರಾಜ್ಯದಲ್ಲಿ ಇಂದಿನಿಂದ ಜಾರಿಗೊಳಿಸಿರುವ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಇದು ಏ. ೧೫ರ ಮಧ್ಯರಾತ್ರಿವರೆಗೂ ಜಾರಿಯಲ್ಲಿರುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಸಾರ್ವಜನಿಕರಿಗೆ ದಂಡ ವಿಧಿಸುವುದಾಗಿ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದೆ.
ಮಾಸ್ಕ್ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು. ಕನಿಷ್ಟ ೬ ಅಡಿ ಅಂತರ ಕಾಪಾಡಿಕೊಳ್ಳಬೇಕು. ಸಿನಿಮಾ ಚಿತ್ರಮಂದಿರಗಳು, ಮಾಲ್‌ಗಳು, ಸಭಾಂಗಣಗಳು, ರೆಸ್ಟೊರೆಂಟ್‌ಗಳು ರಾತ್ರಿ ೮ ಗಂಟೆಯಿಂದ ಬೆಳಿಗ್ಗೆ ೭ ಗಂಟೆವರೆಗೆ ಬಂದ್ ಆಗಲಿವೆ. ಆದರೆ, ಹೋಂ ಡಿಲೆವರಿಗೆ ಅವಕಾಶ ಕಲ್ಪಿಸಲಾಗಿದೆ.
ರಾತ್ರಿ ವಿಧಿಸಲಾಗಿರುವ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ನಿಯಮ ಉಲ್ಲಂಘಿಸಿದರೆ ೧೦೦೦ ರೂ. ದಂಡ, ಮಾಸ್ಕ್ ಧರಿಸದಿದ್ದರೆ ೫೦೦ ರೂ. ದಂಡ ಪಾವತಿಸಬೇಕಾಗುತ್ತದೆ.
ಕೊರೊನಾ ನಿಯಮಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೂ ದಂಡ ಕಟ್ಟಿಟ್ಟ ಬುತ್ತಿ, ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷೇಧಿಸಲಾಗಿದೆ. ವರ್ಕ್ ಫ್ರಂ ಹೋಂಗೆ ಪ್ರೋತ್ಸಾಹ ನೀಡಿದ್ದು, ಧರ್ಮಲ್ ಸ್ಕ್ರೀನಿಂಗ್, ಕೈ ಸ್ವಚ್ಛತೆ, ಸ್ಯಾನಿಟೈಸರ್ ಎಲ್ಲ ಪ್ರದೇಶಗಳ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಲಭ್ಯವಾಗುವಂತೆ ನಿಗಾವಹಿಸಲಾಗಿದೆ.
ರಾಜ್ಯದಲ್ಲಿ ಯಾವುದೇ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಸಮಾರಂಭಗಳಿಗೆ ಅವಕಾಶವಿಲ್ಲ. ಖಾಸಗಿ ಕಚೇರಿಗಳಲ್ಲಿ ಶೇ. ೫೦ ರಷ್ಟು ನೌಕರರು ಕೆಲಸ ನಿರ್ವಹಸಲು ಅವಕಾಶ ಕಲ್ಪಿಸಲಾಗಿದೆ.