ಮಹಾರಾಷ್ಟ್ರದಲ್ಲಿ ಮುಂದುವರಿದ ಕೋವಿಡ್ ಅಬ್ಬರ : ಒಂದೇ ದಿನ ೫೯ ಸಾವಿರ ಪ್ರಕರಣ ದಾಖಲು!

ಮುಂಬೈ: ಕೋವಿಡ್-೧೯ ರಿಂದ ಅಕ್ಷರಶಃ ತತ್ತರಿಸಿ ಹೋಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ, ಬುಧವಾರ ಒಂದೇ ದಿನ ೫೯,೯೦೭ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ! ಜೊತೆಗೆ ಸೋಂಕಿನಿಂದ ೩೨೨ ಜನರು ಅಸುನೀಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಒಂದೇ ದಿನದಲ್ಲಿ ಇಷ್ಟೊಂದು ಪ್ರಕರಣ ವರದಿಯಾಗಿರುವುದು ಮಹಾರಾಷ್ಟ್ರದಲ್ಲಿ ಇದೇ ಮೊದಲಾಗಿದೆ.

ಒಟ್ಟಾರೆ ಇಲ್ಲಿಯವರೆಗೂ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟಾರೆ ೩೧,೭೩,೨೬೧ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದಲರಲ್ಲಿ ೫೬,೬೫೨ ಜನರು ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯವಾಗಿರುವ ಪ್ರಕರಣ ಸಂಖ್ಯೆ ೫ ಲಕ್ಷದ ಗಡಿ ದಾಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿಗಳು ತಿಳಿಸುತ್ತವೆ.

ಪುಣೆ ಹಾಗೂ ಮುಂಬೈನಲ್ಲಿ ಭಾರೀ ದೊಡ್ಡ ಪ್ರಮಾಣದ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಪುಣೆಯಲ್ಲಿ ಬುಧವಾರ ೫೬೩೭ ಹೊಸ ಪ್ರಕರಣ ಪತ್ತೆಯಾಗಿದ್ದು, ೯೦,೦೪೮ ಸಕ್ರಿಯ ಪ್ರಕರಣಗಳಿವೆ. ಉಳಿದಂತೆ ರಾಜಧಾನಿ ಮುಂಬೈ ಮಹಾನಗರಿಯಲ್ಲಿ ೧೦,೪೪೨ ಹೊಸ ಪ್ರಕರಣಗಳು ದಾಖಲಾಗಿದೆ. ಸದ್ಯ ಮುಂಬೈನಲ್ಲಿ ೮೩,೧೮೫ ಸಕ್ರಿಯ ಪ್ರಕರಣಗಳಿವೆ.

ಸೋಂಕು ನಿಯಂತ್ರಣಕ್ಕೆ ಬಾರದಿರುವುದ ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಸ್ಪತ್ರೆಗಳಲ್ಲಿ ಬೆಡ್ ಗಳ ಸಮಸ್ಯೆ ಉಂಟಾಗುವ ಆತಂದ ಉಂಟು ಮಾಡಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಅನುಸಾರ, ರಾಜ್ಯದ ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಶೇ. ೮೦.೫೧ ರಷ್ಟು ಐಸೋಲೇಟೆಡ್ ಬೆಡ್ ಗಳು, ಶೇ. ೩೨.೭೭ ಆಕ್ಸಿಜನ್ ಬೆಡ್ ಹಾಗೂ ಶೇ.೬೦.೯೪ ಐ.ಸಿ.ಯು. ಬೆಡ್ ಗಳು ಕೋವಿಡ್ ರೋಗಿಗಳಿಂದ ಭರ್ತಿಯಾಗಿವೆ ಎಂದು ತಿಳಿಸುತ್ತವೆ.

ಕಳೆದ ವಾರ ಮಾತನಾಡಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆರವರು, ರಾಜ್ಯದಲ್ಲಿ ಏರುತ್ತಿರುವ ಸೋಂಕಿನ ಪ್ರಕರಣದಿಂದ ಬೆಡ್ ಗಳ ಸಮಸ್ಯೆ ಉಂಟಾಗುವ ಆತಂಕ
ವ್ಯಕ್ತಪಡಿಸಿದ್ದರು. ಇದೀಗ ಎ. ೧ ರಿಂದ ೭ ರವರೆಗಿನ ಒಂದೇ ವಾರದಲ್ಲಿ ೩.೬೦ ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕು ಏರುಗತಿಯಲ್ಲಿ ಸಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ.