ಮಹಾರಾಷ್ಟ್ರಕ್ಕೆ ಕೇಂದ್ರದಿಂದ ಸಾವಿರ ವೆಂಟಿಲೇಟರ್ ಪೂರೈಕೆ

ಪುಣೆ, ಏ.೧೧-ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ೧೧೨೧ ವೆಂಟಿಲೇಟರ್‌ಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಮೂರ್‍ನಾಲ್ಕು ದಿನಗಳ ಒಳಗಾಗಿ ಈ ವೆಂಟಿಲೇಟರ್‌ಗಳನ್ನು ರವಾನಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಜಾವಡೇಕರ್ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಜತೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡರು.
ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ ಕಂಡು ಬಂದಿದೆ. ಪರಾಮರ್ಶೆ ಸಭೆಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ೧೧೨೧ ವೆಂಟಿಲೇಟರ್‌ಗಳು ಮಹಾರಾಷ್ಟ್ರಕ್ಕೆ ರವಾನೆಯಾಗಲಿದೆ. ಗುಜರಾತ್‌ನಿಂದ ೭೦೦ ಹಾಗೂ ೪೨೧ ವೆಂಟಿಲೇಟರ್‌ಗಳು ಆಂಧ್ರಪ್ರದೇಶದಿಂದ ಪೂರೈಕೆ ಮಾಡಲಾಗುವುದು ಎಂದು ಜಾವಡೇಕರ್ ತಿಳಿಸಿದರು.
ಮಹಾರಾಷ್ಟ್ರದಲ್ಲೂ ಕೋವಿಡ್ ಲಸಿಕೆ ಕೊರತೆ ಕಂಡು ಬಂದಿದ್ದು, ಈ ಬಗ್ಗೆಯೂ ಕ್ರಮಕೈಗೊಳ್ಳಲಾಗುವುದು. ಇತ್ತೀಚಿನ ವರದಿಗಳ ಪ್ರಕಾರ ಮಹಾರಾಷ್ಟ್ರ ರಾಜ್ಯಕ್ಕೆ ೧ ಕೋಟಿ ೧೦ ಲಕ್ಷ ಡೋಸ್‌ಗಳನ್ನು ರವಾನಿಸಲಾಗಿದೆ.
ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳು ೧ ಕೋಟಿ ಲಸಿಕೆ ಪಡದ ರಾಜ್ಯಗಳಾಗಿವೆ.