
ಕಲಬುರಗಿ,ನ.2-ಕಲಬುರಗಿಯಿಂದ ಮಹಾರಾಷ್ಟ್ರದ ಉಮ್ಮರ್ಗಾಕ್ಕೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 8,10,934 ರೂ.ಮೌಲ್ಯದ 238 ಕ್ವಿಂಟಾಲ್ ಅಕ್ಕಿ, 3 ಲಕ್ಷ ರೂ.ಮೌಲ್ಯದ ಲಾರಿ ಸೇರಿ 11,10,934 ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಆಳಂದ್ ಚೆಕ್ ಪೋಸ್ಟ್ ಏರಿಯಾದ ಲಾರಿ ಚಾಲಕ ಸೈಫಾಲಿಕ್ ಮುಲ್ಲಾ, ಶಹಾಬಜಾರ ತಾಂಡಾದ ಶಿವಕುಮಾರ ಅಲಿಯಾಸ್ ನಾತು ರಾಠೋಡ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪಡಿತರ ಅಕ್ಕಿಯನ್ನು ಕಲಬುರಗಿಯಿಂದ ಲಾರಿಯಲ್ಲಿ ಅಕ್ರಮವಾಗಿ ಮಹಾರಾಷ್ಟ್ರದ ಉಮ್ಮರ್ಗಾಕ್ಕೆ ಸಾಗಿಸಿ ರಾಜು ರಾಠೋಡ್ ಎಂಬಾತ ಎಲ್ಲಿ ಇಳಿಸಲು ಹೇಳುತ್ತಾರೋ ಅಲ್ಲಿ ಇಳಿಸುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸೈಫಾಲಿಕಾ ಮುಲ್ಲಾ, ಶಿವಕುಮಾರ ಅಲಿಯಾಸ್ ನಾತು ರಾಠೋಡ್ ಮತ್ತು ರಾಜು ರಾಠೋಡ್ ವಿರುದ್ಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.