ಮಹಾರಾಣಿ ಕಾಲೇಜು ಆವರಣದಲ್ಲಿ ವಿಶ್ವ ಪರಿಸರದಿನ

ಚಿತ್ರದುರ್ಗ ಜೂ.6: ಮಹರ್ಷಿ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಹಾಗೂ ಭಾವಸಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ  ನಗರದ ಮಹಾರಾಣಿ ಕಾಲೇಜು ಆವರಣದಲ್ಲಿ ವಿಶ್ವ ಪರಿಸರದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನಚಾರ್ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ಜು ವಹಿಸಿದ್ದ ಮಹರ್ಷಿ ಯೋಗ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ಕೆ‌.ರವಿಅಂಬೇಕರ್ ಮಾತನಾಡಿ ” ಇತ್ತೀಚಿನ ದಿನಗಳಲ್ಲಿ ಕೊರೊನಾ, ಬ್ಲ್ಯಾಕ್ ಫಂಗಸ್ ಇನ್ನೂ ಬೇರೆ ಬೇರೆ ಹೆಸರಿನ ಹೊಸಹೊಸ ಸಾಂಕ್ರಾಮಿಕ ರೋಗಗಳು ಮಾನವ ಕುಲದ ಸಂತೋಷವನ್ನೇ ಹಾಳು ಮಾಡುತ್ತಿವೆ ಇದಕ್ಕೆಲ್ಲ ಕಾರಣ ಮಾನವ ತನ್ನ ಸುಖಕ್ಕಾಗಿ ಪರಿಸರವನ್ನು ಹಾಳು ಮಾಡಿರುವುದು. ಪರಿಸರವನ್ನು ವಿನಾಶಕ್ಕೆ ಕೊಂಡೊಯ್ದಿರುವುದು ಎಲ್ಲಿಯವರೆಗೆ ನಾವು ಪರಿಸರದ ಬಗ್ಗೆ ಕಾಳಜಿ ವಹಿಸುವುದಿಲ್ಲವೊ ಅಲ್ಲಿಯವರೆಗೆ ಪ್ರಕೃತಿಯ ಕೋಪಕ್ಕೆ ತುತ್ತಾಗುತ್ತೇವೆ, ಪ್ರಕೃತಿ ವಿನಾಶದಿಂದ ಬರುವ ರೋಗಗಳಿಂದ ಮುಕ್ತರಾಗಲು ಸಾಧ್ಯವಿಲ್ಲ, ಹಾಗೆಯೇ ಜೂನ್ 5ನೇ ದಿನದಂದು “ವಿಶ್ವಪರಿಸರ ದಿನಾಚರಣೆ”ಯಾಗಿ ಆಚರಿಸಲಾಗುತ್ತಿದೆ. ವರ್ಷಕ್ಕೊಮ್ಮೆ ದಿನ ಆಚರಿಸಿದರೆ ಸಾಲದು ಪ್ರತಿ ದಿನ ಪರಿಸರದ ಬಗ್ಗೆ ನಾವು ಕಾಳಜಿ ವಹಿಸಬೇಕು,ಪ್ರತಿ ವರ್ಷ ಒಂದೊಂದು ಧ್ಯೇಯವಾಕ್ಯಗಳೊಂದಿಗೆ ಈ ಪರಿಸರದಿನ ಆಚರಿಸಲಾಗುತ್ತದೆ. ಈ 2021 ರ ವರ್ಷವನ್ನು “ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ”ಎಂಬ ಧ್ಯೇಯ ವಾಕ್ಯದೊಂದಿಗೆಆಚರಿಸಲಾಗುತ್ತಿದೆ.’ ಎಂದು ದ್ಯೇಯವಾಕ್ಯದಂತೆ ನಾವೆಲ್ಲರೂ ಒಂದಾಗಿ ಪರಿಸರವನ್ನು ಪುನಃಸ್ಥಾಪನೆ ಮಾಡೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎಸ್.ಎಫ್. ಸಿ ನಿವೃತ್ತ ಮ್ಯಾನೇಜರ್ ಎಲ್ಲಪ್ಪ, ಶ್ರೀಮತಿ ಪಾರ್ವತಮ್ಮ, ಮಹರ್ಷಿ ಯೋಗ ಸಂಸ್ಥೆಯ ಸದಸ್ಯರಾದ ಶ್ರೀಮತಿ ವಸಂತಲಕ್ಷ್ಮಿ, ಭರತನಾಟ್ಯ ಕಲಾವಿದೆ ಕುಮಾರಿ ಗಗನ, ರಮೇಶ್ ಕುಮಾರ್, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.