ಮಹಾಮಾರಿ ಕೊರೊನಾಗೆ ನಗರಸಭೆ ಸದಸ್ಯೆ ಲಲಿತಾಬಾಯಿ ಡಾಂಗೆ ಬಲಿ

ಬಸವಕಲ್ಯಾಣ:ಎ.28: ಮಹಾಮಾರಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಕೆಲ ದಿನಗಳ ಹಿಂದೆ ಇಲ್ಲಿಯ ನಗರಸಭೆಯ ಬಿಜೆಪಿ ಸದಸ್ಯರೊಬ್ಬರಿಗೆ ಬಲಿ ಪಡೆದಿದ್ದ ಕೊರೊನಾ ಸೋಂಕು, ಮಂಗಳವಾರ ಮತ್ತೊಬ್ಬ ಸದಸ್ಯರನ್ನು ಬಲಿ ಪಡೆದಿದೆ.
ನಗರದ ತ್ರಿಪುರಾಂತನ ವಾರ್ಡ್ ಸಂಖ್ಯೆ-23ರ ನಗರಸಭೆ ಸದಸ್ಯೆ ಲಲಿತಾಬಾಯಿ ಗಣಪತಿರಾವ ಡಾಂಗೆ (58) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಏಪ್ರಿಲ್ 16ರಂದು ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತ ಪಡಿಸಿವೆ. ಮೃತರು ಪತಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತೆಯಾಗಿದ್ದ ಲಲಿತಬಾಯಿ ಡಾಂಗೆ ಅವರು, ಕಳೆದ ಸಾಲಿನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಾರ್ಡ್-23ರಿಂದ ಆಯ್ಕೆಯಾಗುವ ಮೂಲಕ ಇದೇ ಮೊದಲ ಬಾರಿಗೆ ನಗರಸಭೆ ಪ್ರವೇಶಿಸಿದರು.
ಮಹಾಮಾರಿ ಕೊರೊನಾ ಸೋಂಕಿನಿಂದ ಕಳೆದ ತಿಂಗಳು ಇಲ್ಲಿಯ ವಾರ್ಡ್-11ರ ನಗರಸಭೆ ಬಿಜೆಪಿ ಸದಸ್ಯ ಮಾರುತಿ ಲಾಡೆ ಬಲಿಯಾಗಿದ್ದರು. ಇದೀಗ ಅದೇ ಪಕ್ಷಕ್ಕೆ ಸೇರಿದ ಮತ್ತೊಬ್ಬ ಸದಸ್ಯರನ್ನು ಬಲಿ ಪಡೆಯುವ ಮೂಲಕ ತನ್ನ ಅಟ್ಟ ಹಾಸ ಮುಂದುವರೆಸಿದೆ.