ಮಹಾಮಾರಿ ಕೊರೊನಾಗೆ ಗ್ರಾಪಂ ಯುವ ಅಧ್ಯಕ್ಷ ಬಲಿ

ಬಸವಕಲ್ಯಾಣ:ಮೇ.3: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೊನಾ ಸೋಂಕು ತಾಲೂಕಿನ ಮಂಠಾಳ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬಲಿ ಪಡೆದಿದೆ.
ಮಂಠಾಳ ಗ್ರಾಪಂ ಅಧ್ಯಕ್ಷ ಹಣಮಂತ ದತ್ತು ಪದ್ಮೆ(31) ಕೊರೊನಾಗೆ ಬಲಿಯಾದ ಯುವ ಅಧ್ಯಕ್ಷರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲಿ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದ ಇವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಗೃಹ ನಿರ್ಮಾಣ ಮಹಾಮಂಡಳಿಯ ನಿವೃತ್ತ ಅಧಿಕಾರಿ ದತ್ತು ಪದ್ಮೆ ಅವರ ಪುತ್ರರಾಗಿದ್ದ ಹಣಮಂತ ಪದ್ಮೆ ಅವರು, ಇತ್ತಿಚಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಮಂಠಾಳ ಗ್ರಾಮದ ವಾರ್ಡ್ ಸಂಖ್ಯೆ-8ರಿಂದ ಅವಿರೋಧವಾಗಿ ಗೆಲುವು ಸಾಧಿಸಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಣಮಂತ ಪದ್ಮೆ ಅವರ ತಂದೆ ದತ್ತು ಪದ್ಮೆ ಅವರಿಗೂ ಕೂಡ ಕೊರೊನಾ ಸೋಂಕು ಧೃಡಪಟ್ಟಿದ್ದು, ಇವರು ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ತಿಂಗಳು ನಡೆದ ಬಸವಕಲ್ಯಾಣ ಕ್ಷೇತ್ರದ ವಿಧಾನ ಸಭೆ ಉಪ ಚುನಾವಣೆ ವೇಳೆಯಲ್ಲಿ ತಂದೆ ಮತ್ತು ಮಗ ಇಬ್ಬರು ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಚುನಾವಣೆ ಮುಗಿದ ನಂತರ ಕೊರೊನಾ ಧೃಡಪಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದರು ಎಂದು ತಿಳಿದು ಬಂದಿದೆ. ಗ್ರಾಪಂ ಅಧ್ಯಕ್ಷರ ನಿಧನದಿಂದಾಗಿ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ ಮಾಡುವ ಜೊತೆಗೆ ಸೋಂಕಿನ ತೀವ್ರತೆಯ ಆತಂಕವು ಮನೆ ಮಾಡಿದೆ.