ಮಹಾಮಳೆಗೆ ತಮಿಳುನಾಡು ತತ್ತರ ಜನಜೀವನ ಅಸ್ತವ್ಯಸ್ತ

ಚೆನ್ನೈ, ನ. ೮- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ವರುಣ ಆರ್ಭಟಕ್ಕೆ ಸಾಮಾನ್ಯ ಜನಜೀವನ ಅಸ್ಯವ್ಯಸ್ತಗೊಂಡಿದೆ. ಮಹಾಮಳೆಗೆ ಚೆನ್ನೈ ನಗರ ಅಕ್ಷರ ಸಹ ತತ್ತರಿಸಿದ್ದು ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಚೆನ್ನೈನಲ್ಲಿ ಅತೀ ಹೆಚ್ಚು ೧೩೪.೨೯ ಮಿ.ಮೀ ಮಳೆಯಾಗಿದೆ. ಗ್ರೆಟರ್ ಚೆನ್ನೈ ಕಾರ್ಪೋರೇಷನ್ ೧೬೦ ಪರಿಹಾರ ಶಿಬರಗಳನ್ನು ಸ್ಥಾಪಿಸಲಾಗಿದೆ.
ಕಾಂಚಿಪುರಂ ಮತ್ತು ತಿರುವಳ್ಳುರಿನಲ್ಲಿ ಪ್ರವಾಹ ಎಚ್ಚರಿಕೆ ನೀಡಿದ್ದು, ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಮಾಹಿತಿ ಪಡೆದುಕೊಂಡರು. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಕೈಗೊಳ್ಳಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ೬ ವರ್ಷದ ಬಳಿಕ ದಾಖಲೆ ಪ್ರಮಾಣದಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ವರುಣ ಅಬ್ಬರಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬಿಟ್ಟುಬಿಡದೆ ವರುಣ ಅಬ್ಬರಿಸುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ ೨ ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ೧೨ ಘಂಟೆಗಳ ಅವಧಿಯಲ್ಲಿ ಬಾರಿ ಮಳೆಯಾಗಿದ್ದು, ಚೆನ್ನೈನ ಹಲವು ರಸ್ತೆಗಳು ಕೆರೆಯಾಗಿ ಮಾರ್ಪಟ್ಟಿವೆ. ವರ್ಷಧಾರೆಯಿಂದಾಗಿ ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಆಂಧ್ರ ಮತ್ತು ತಮಿಳುನಾಡಿನ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಇಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಬೆಂಗಳೂರಿನಲ್ಲೂ ತುಂತುರು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ನಗರದಲ್ಲೂ ತುಂತುರು ಮಳೆ
ಈ ಮಧ್ಯೆ ಬೆಂಗಳೂರಿನಲ್ಲೂ ಕಳೆದ ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಸುರಿದಿದ್ದು, ಮೋಡ ಕವಿದ ವಾತಾವರಣ ಕಂಡು ಬಂದಿದೆ. ಮಳೆಯ ನಡುವೆ ವಿದ್ಯಾರ್ಥಿಗಳು ಕಚೇರಿಗೆ ತೆರಳುವ ದೃಶ್ಯ ಕಂಡು ಬಂತು.
ನಗರದ ಹಲವೆಡೆ ತುಂತುರು ಮಳೆ ಬೀಳುತ್ತಿದ್ದ ಕಾರಣ ಬಹುತೇಕ ಕಡೆಗಳಲ್ಲಿ ವಾಹನ ದಟ್ಟಣೆ ಕಂಡು ಬಂದು ವಾಹನ ಸವಾರರು ಪರದಾಡುವಂತಾಯಿತು. ಮಳೆ ಜೊತೆಗೆ ಬಲವಾದ ಗಾಳಿ ಬೀಸುತ್ತಿರುವುದರಿಂದ ತಣ್ಣನೆ ವಾತಾವರಣ ಕಂಡು ಬಂದಿದೆ. ಹೀಗಾಗಿ ಜನರು ಬೆಚ್ಚನೆ ಉಡುಪುಗಳಿಗೆ ಮೋರೆ ಹೋಗಿದ್ದಾರೆ. ಇನ್ನು ಕೆಲವರು ಕೊಡೆಗಳನ್ನು ಹಿಡಿದು ತಮ್ಮ ಪ್ರತಿನಿತ್ಯದ ಕೆಲಸಗಳಿಗೆ ತೆರಳುತ್ತಿದ್ದರು.