ಮಹಾಪರಿನಿರ್ವಾಣ: ವಾಡಿಯಲ್ಲಿ ಡಿ. 6ಕ್ಕೆ ರಕ್ತದಾನ, ಅನ್ನದಾನ ಶಿಬಿರ

ಕಲಬುರಗಿ,ನ.24: ಡಿಸೆಂಬರ್ 6ರಂದು ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನಿಮಿತ್ಯ ಚಿತ್ತಾಪುರ ತಾಲ್ಲೂಕಿನ ವಾಡಿ ರೈಲು ನಿಲ್ದಾಣದಲ್ಲಿ ರಕ್ತದಾನ ಹಾಗೂ ಅನ್ನದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನ ಭಂತೆ ಬುದ್ಧರತ್ನ ಅವರು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ತರುಣ ಸಂಘದಿಂದ ಇಂತಹ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆಯುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಅವರ ವಿಚಾರಧಾರೆಗಳು ಹಾಗೂ ಅವರ ಆಶಯಗಳು ಸಾಕಾರಗೊಳ್ಳಬೇಕು ಎಂದು ಹೇಳಿದ ಅವರು, ಡಾ. ಅಂಬೇಡ್ಕರ್ ಅವರ ತತ್ವ ಹಾಗೂ ಸಿದ್ದಾಂತಗಳನ್ನು ಪಾಲಿಸಿಕೊಂಡು ಬರುವ ದಿಸೆಯಲ್ಲಿ ಸಂಘವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ ಎಂದರು.
ಇದೇ ನವೆಂಬರ್ 28ರಂದು ಉಚಿತ ಹೃದಯರೋಗ ತಪಾಸಣೆ ಸೇರಿದಂತೆ ವಿವಿಧ ರೋಗಗಳ ತಪಾಸಣೆಗಾಗಿ ಆರೋಗ್ಯ ಶಿಬಿರವನ್ನೂ ಸಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮಹಾಪರಿನಿರ್ವಾಣ ನಿಮಿತ್ಯ ಈ ಬಾರಿ ಚಿತ್ತಾಪುರ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನವಾಗಿ 10,000ರೂ.ಗಳು, ದ್ವಿತೀಯ ಬಹುಮಾನವಾಗಿ 5000ರೂ.ಗಳು ಹಾಗೂ ತೃತೀಯ ಬಹುಮಾನವಾಗಿ 2,500ರೂ.ಗಳ ನಗದು ಬಹುಮಾನ ಕೊಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಣಧೀರ್ ಹೊಸಮನಿ, ಸಂದೀಪ್ ಕಟ್ಟಿ, ಸಾಯಿನಾಥ್ ಪರಶುರಾಮ್, ಪರಶುರಾಮ್ ಮಂಗಳೂರಕರ್ ಮುಂತಾದವರು ಉಪಸ್ಥಿತರಿದ್ದರು.