ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿ ತಿಳಿಯೋಣ: ರಾಮಚಂದ್ರನ್ ಆರ್

ಬೀದರ ಏ 6: ಪ್ರತಿಯೊಬ್ಬರು ಕೂಡ ಸರಿ ಸಮಾನವಾದ ಜೀವನ ನಡೆಸಬೇಕು ಎನ್ನುವ ಮಹದೋದ್ದೇಶದೊಂದಿಗೆ ಶ್ರಮಿಸಿದ ಡಾ.ಬಾಬು ಜಗಜೀವನರಾಂ ಅವರ ಜೀವನ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಅರ್ಥಪೂರ್ಣ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏಪ್ರೀಲ್ 5ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಅವರ 114ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಮಾನವ ಕುಲದ ಜೀವನಾನುಭವನ್ನು ನಾವು ಅರಿಯಬೇಕು. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಬೇಕು. ಅವರು ತಮ್ಮ ಜೀವನದಲ್ಲಿ ಕಂಡುಂಡ ಅನುಭವಗಳ ಮೇಲೆ ಸಾಗಿಸಿದ ಜೀವನಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಫಲ ದೊರೆತರಷ್ಟೇ ಗೆಲುವು ಎಂದು ಭಾವಿಸಬಾರದು. ಪ್ರತಿಯೊಂದು ಪ್ರಯತ್ನವೂ ಗೆಲುವೇ ಎಂದು ಭಾವಿಸಿ ನಡೆಯಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಪ್ರಯತ್ನವನ್ನು ಪರಿಪೂರ್ಣ ಮನಸಿನಿಂದ ನಡೆಸಬೇಕು ಎಂದು ಸಲಹೆ ಮಾಡಿದರು.
ಜೀವನದಲ್ಲಿ ಸೋಲು, ಗೆಲವು ಮುಖ್ಯವಲ್ಲ, ಇವತ್ತಿನ ಸೋಲು ನಾಳೆಯ ಗೆಲುವಿಗೆ ಆಧಾರವಾಗಿರಲಿದೆ. ಒಳ್ಳೆಯ ಮನಸಿನಿಂದ ಬದುಕೋಣ. ಎಲ್ಲರನ್ನೂ ಅಣ್ಣ ತಮ್ಮಂದಿರಂತೆ ತಿಳಿದು ನಡೆಯೋಣ ಎಂದರು.
ಒಟ್ಟಿಗೆ ಸೇರಿ ನಾವೆಲ್ಲರೂ ಭಾರತೀಯರು, ಭಾರತ ದೇಶದ ಕಟ್ಟಕಡೆಯ ವ್ಯಕ್ತಿಯ ಹಸಿವನ್ನು ನಿರ್ಮೂಲನೆ ಮಾಡುವತ್ತ ನಮ್ಮ ಹೋರಾಟವನ್ನು ಮುಂದುವರೆಸೋಣ ಎನ್ನುವ ಮಹಾನ್ ವ್ಯಕ್ತಿಗಳ ಕನಸಿನಂತೆ ನಾವೆಲ್ಲರೂ ಕ್ರಮ ವಹಿಸೋಣ ಎಂದು ತಿಳಿಸಿದರು.
ಎಲ್ಲರಿಗೂ ನ್ಯಾಯಬದ್ಧವಾಗಿ, ಕಾನೂನುಬದ್ಧವಾಗಿ, ಸಂವಿಧಾನಬದ್ಧವಾಗಿ ಹಕ್ಕುಗಳನ್ನು ಕೊಂಡೋಯ್ಯುವುದರಲ್ಲಿ ಜಿಲ್ಲಾಡಳಿತಕ್ಕೆ, ಸರ್ಕಾರದ ಅಧಿಕಾರಿಗಳ ಜೊತೆಗೆ, ಸಂಘ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಸಾರ್ವಜನಿಕರಲ್ಲಿನ ತಪ್ಪು ತಿಳಿವಳಿಕೆಗಳನ್ನು ದೂರ ಮಾಡಬೇಕು. ಜ್ಞಾನದ ಬೆಳಕನ್ನು ಅವರಿಗೆ ದಾನವಾಗಿ ಕೊಡಬೇಕು. ಅವರಿಂದ ಇನ್ನೊಬ್ಬರಿಗೆ, ಮತ್ತೊಬ್ಬರಿಗೆ ಸರ್ಕಾರದ ಫಲವನ್ನು, ಜ್ಞಾನದ ಫಲವನ್ನು ತಲುಪಿಸುವುದರಲ್ಲಿ ಪ್ರತಿಯೊಬ್ಬರು ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೂಡ ನಾವೆಲ್ಲರೂ ಒಗ್ಗೂಡಿ ದುಡಿಯೋಣ, ಕೆಲಸ ನಿರ್ವಹಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ವಿಜಯಲಕ್ಷ್ಮಿ, ಮುಖಂಡರಾದ ರಾಜು ಕಾಡ್ಯಾಳ, ಮಾರುತಿ ಬೌದ್ಧೆ, ಅನೀಲ್ ಬೆಲ್ದಾರ, ಚಂದ್ರಕಾಂತ ಹಿಪ್ಪಳಗಾಂವ್, ವಿಜಯಕುಮಾರ ಸೋನಾರೆ, ಅಬಿ ಕಾಳೆ, ಫರ್ನಾಂಡಿಸ್ ಹಿಪ್ಪಳಗಾಂವ್, ರಮೇಶ ಕಟ್ಟಿತೂಗಾಂವ್, ರೋಹಿದಾಸ್ ಗೂಡೆ ಹಾಗು ಇನ್ನೀತರರು ಇದ್ದರು.