ಮಹಾನ್ ವ್ಯಕ್ತಿಗಳನ್ನು ಜಾತಿಗೆ ಸೀಮಿತಗೊಳಿಸದಿರಿ


ಹೊನ್ನಾಳಿ.ನ.೨೨; ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಭಾವನೆ ಸಲ್ಲದು ಎಂದು ಕಸಬಾ ಸೊಸೈಟಿ ಮಾಜಿ ಅಧ್ಯಕ್ಷ ದಿಡಗೂರು ಜಿ.ಎಚ್. ತಮ್ಮಣ್ಣ ಹೇಳಿದರು.
ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾವಾಹಿ ಪ್ರಸಾರ ಮಾಡುತ್ತಿರುವ ಝೀ ಕನ್ನಡ ವಾಹಿನಿಗೆ ಶುಭ ಕೋರಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡ ಫ್ಲೆಕ್ಸ್ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸಮ ಸಮಾಜ ನಿರ್ಮಾಣಕ್ಕೆ ಬಹುವಾಗಿ ಶ್ರಮಿಸಿದ್ದಾರೆ. ಅವರ ಜೀವನದ ತತ್ವ-ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಂಡು ಮುನ್ನಡೆಯೋಣ. ನಮ್ಮ ನಡೆ-ನುಡಿಗಳಲ್ಲಿ ಸಾಮ್ಯತೆ ಮೆರೆಯೋಣ ಎಂದು ತಿಳಿಸಿದರು.ಬಿಜೆಪಿ ಮುಖಂಡ ಎಂ.ಪಿ. ರಮೇಶ್ ಫ್ಲೆಕ್ಸ್ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಸುಮಾರು ಎರಡು ವರ್ಷಗಳಿಗೂ ಅಧಿಕ ಕಾಲ ಆಳವಾದ ಅಧ್ಯಯನ ನಡೆಸಿ ಭಾರತದ ಸಂವಿಧಾನ ರಚಿಸಿದ್ದಾರೆ. ಅದರ ಅಡಿಯಲ್ಲೇ ಇಂದು ನಾವು ಸಶಕ್ತ ಭಾರತ ನಿರ್ಮಾಣ ಕಾರ್ಯ ನಡೆಸುತ್ತಿದ್ದೇವೆ. ಜನಪ್ರತಿನಿಧಿಗಳ ಆಯ್ಕೆ, ಬದುಕುವ ಹಕ್ಕು, ಮೂಲಭೂತ ಕರ್ತವ್ಯ ಮತ್ತಿತರ ಅನೇಕ ಸವಲತ್ತುಗಳನ್ನು ನಮಗೆ ಅಂಬೇಡ್ಕರ್ ವಿರಚಿತ ಸಂವಿಧಾನ ನೀಡಿದೆ. ಎಲ್ಲಾ ಸಮುದಾಯಗಳಿಗೆ ಪೂರಕವಾದ ಮೀಸಲಾತಿ ನೀಡಿದ್ದಾರೆ. ಅಂಬೇಡ್ಕರ್ ಅವರಂತೆ ನಿರಂತರ ಅಧ್ಯಯನ ನಡೆಸಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಅದೇ ನಾವು ಅವರಿಗೆ ಸಲ್ಲಿಸುವ ಬಹು ದೊಡ್ಡ ಗೌರವ ಎಂದು ವಿವರಿಸಿದರು.
ಗ್ರಾಪಂ ಮಾಜಿ ಸದಸ್ಯರಾದ ಎ.ಕೆ. ರುದ್ರಪ್ಪ, ಜಲಜಾಕ್ಷಿ ಗಣೇಶ್, ಮುಖಂಡರಾದ ಎಸ್.ಕೆ. ಕರಿಯಪ್ಪ, ಡಿ. ಬಸಪ್ಪ, ಎಸ್.ಕೆ. ನರಸಿಂಹಮೂರ್ತಿ, ಮಾರಿಕೊಪ್ಪ ಮಂಜಪ್ಪ, ಕೊಡತಾಳ್ ರುದ್ರೇಶ್, ಮಂಜುನಾಥ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಎಂ.ಪಿ. ರಮೇಶ್ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾವಾಹಿ ಪ್ರಸಾರ ಮಾಡುತ್ತಿರುವ ಝೀ ಕನ್ನಡ ವಾಹಿನಿಗೆ ಶುಭ ಕೋರುವ ಫ್ಲೆಕ್ಸ್ ಅನಾವರಣಗೊಳಿಸಿದರು.