ಮಹಾನ್ ನಾಯಕರ ಭಾವಚಿತ್ರಗಳಿಗೆ ಅಪಮಾನ: ಕ್ರಮಕ್ಕೆ ಒತ್ತಾಯ

ತುಮಕೂರು, ನ. ೧೫- ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧಿ ಮತ್ತು ಜಗಜ್ಯೋತಿ ಬಸವೇಶ್ವರರ ಪೋಟೋಗಳನ್ನು ಹಿಮ್ಮುಖವಾಗಿಟ್ಟು ಅಪಮಾನ ಮಾಡಿರುವ ಸಿರಾ ತಾಲ್ಲೂಕು ಬರಗೂರು ಗ್ರಾ.ಪಂ. ಪಿಡಿಓ ಮತ್ತು ಇದಕ್ಕೆ ಕುಮ್ಮಕ್ಕು ನೀಡಿದ ಸಿರಾ ತಾಲೂಕು ಪಂಚಾಯ್ತಿ ಇಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಚಳವಳಿಗಾರರ ಸಮಿತಿ ಮತ್ತು ಕರ್ನಾಟಕದ ದಲಿತ ಒಕ್ಕೂಟದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಕರ್ನಾಟಕ ದಲಿತ ಒಕ್ಕೂಟದ ಹಾಗೂ ಪ್ರಗತಿಪರ ಚಳವಳಿಯ ಸಂಚಾಲಕ ಚಳವಳಿ ರಾಜಣ್ಣ ಮಾತನಾಡಿ, ಇಂದು ಚುನಾವಣೆಯನ್ನು ಸರ್ಕಾರಗಳು ಒಂದು ಹಬ್ಬದ ರೀತಿ ಆಚರಿಸಲು ಪ್ರಮುಖ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ. ಹಾಗೆಯೇ ಜಗತ್ತಿನ ಮೊದಲ ಸಾಂಸತ್ತು ಅನುಭವ ಮಂಟಪವನ್ನು ಕಟ್ಟಿ, ಅಲ್ಲಿ ಎಲ್ಲ ವರ್ಗದ ಕಾಯಕ ಜೀವಿಗಳು ತಮ್ಮ ಹಕ್ಕು ಮಂಡಿಸುವಂತೆ ಮಾಡಿದವರು ಬಸವಣ್ಣ. ಹಾಗೆಯೇ ಬ್ರಿಟಿಷರ ವಿರುದ್ದ ಅಹಿಂಸಾ ಮಾರ್ಗದ ಮೂಲಕ ಹೋರಾಡಿ ಸ್ವಾತಂತ್ರ್ಯ ಗಳಿಸಿಕೊಟ್ಟವರು ಗಾಂಧೀಜಿ. ಇವರಿಗೆ ಈ ಸ್ಥಿತಿಯಾದರೆ, ಇನ್ನು ಸಣ್ಣಪುಟ್ಟ ಸಮುದಾಯದ ಮುಖಂಡರ ಭಾವಚಿತ್ರಗಳ ಪಾಡೇನು ಎಂದು ಪ್ರಶ್ನಿಸಿದರು.
ಹಾಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರ ಫೋಟೋ ಹಾಕುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನೆಪ ಹೇಳಿಕೊಂಡು ಬರಗೂರು ಗ್ರಾ.ಪಂ.ನ ಪಿಡಿಓ ಮತ್ತು ಸಿರಾ ತಾ.ಪಂ.ನ ಇಓ ಅವರುಗಳು ಈ ಇಬ್ಬರು ಮಹನೀಯರು ಪೋಟೋಗಳನ್ನು ಹಿಮ್ಮುಖವಾಗಿ ತೂಗು ಹಾಕುವ ಮೂಲಕ ಅವರು ಗಳಿಗೆ, ಕೋಟ್ಯಂತರ ಸಂಖ್ಯೆಯಲ್ಲಿರುವ ಅವರ ಅನುಯಾಯಿಗಳಿಗೆ ಅಪಮಾನವೆಸಗಿದ್ದಾರೆ. ಈ ಇಬ್ಬರು ಮಹನೀಯರ ಭಾವಚಿತ್ರಗಳನ್ನು ಹಿಮ್ಮುಖವಾಗಿ ತೂಗು ಹಾಕಲು ಇವರ ಆದೇಶ ನೀಡಿದವರು ಯಾರು ಎಂಬುದನ್ನು ತನಿಖೆ ನಡೆಸಿ ಬಹಿರಂಗ ಪಡಿಸಬೇಕು ಎಂದು ಚಳವಳಿ ರಾಜಣ್ಣ ಆಗ್ರಹಿಸಿದರು.
ಒಂದು ವೇಳೆ ಜಿಲ್ಲಾಡಳಿತ ಹಾಗೂ ಸರ್ಕಾರ ಸಿರಾ ತಾಲ್ಲೂಕು ಪಂಚಾಯ್ತಿ ಇಓ ಮತ್ತು ಬರಗೂರು ಗ್ರಾ.ಪಂ. ಪಿಡಿಓ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸದಿದ್ದಲ್ಲಿ ಮಂಗಳವಾರದ ನಂತರ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಚಳವಳಿ ರಾಜಣ್ಣ ತಿಳಿಸಿದರು.