ಮಹಾನಗರ ಪಾಲಿಕೆ ಹೆಚ್ಚಿಸಿರುವ ತೆರಿಗೆ ಕೈಬಿಡಲು ಆಗ್ರಹಿಸಿ ಮನವಿ

ಕಲಬುರಗಿ,ಏ.29- ಕೋವಿಡ್-19 ಎರಡನೆ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಶೇ.12ರಷ್ಟು ತೆರಿಗೆಯನ್ನು ಹೆಚ್ಚಿಸಿರುವ ಮಹಾನಗರ ಪಾಲಿಕೆಯ ಕ್ರಮ ಜನವಿರೋಧಿಯಾಗಿದ್ದು, ಇದನ್ನು ತಕ್ಷಣವೇ ಕೈಬಿಡುವಂತೆ ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ ಅವರು ಒತ್ತಾಯಿಸಿದ್ದಾರೆ.
ಕಳೆದ ವರ್ಷವೂ ಮಹಾನಗರ ಪಾಲಿಕೆ ಶೇ.20 ರಷ್ಟು ತೆರಿಗೆಯನ್ನು ಹೆಚ್ಚಿಸಿದೆ ಪುನಃ ಈ ವರ್ಷವೂ ಶೇ.12ರಷ್ಟು ತೆರಿಗೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊಕೊನಾ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಅವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆಯನ್ನು ಹೆಚ್ಚಿಸುವುದು ಅವೈಜ್ಞಾನಿಕ ಕ್ರಮವಾಗಿದೆ. ಇದನ್ನು ತಕ್ಷಣವೇ ಕೈಬಿಡಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಒಂದು ಕಡೆ ಕೋರೊನಾ ಮಹಾಮಾರಿ ಮತ್ತೊಂದುಕಡೆ, ಪೆಟ್ರೋಲ, ಡಿಸೆಲ್ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ದಿನಬಳಕೆಯ ವಸ್ತುಗಳಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಇವರ ನೆರವಿಗೆ ಬರುವುದು ಬಿಟ್ಟು ಅವರ ಮೇಲೆ ತೆರಿಗೆಯ ಹೊರೆಯನ್ನು ಹಾಕಲು ಹೊರಟಿರುವುದು ಖಂಡನೀಯ.
ತೆರಿಗೆ ಪರಿಷ್ಕರಣೆಯನ್ನು ಮೂರು ವರ್ಷಕ್ಕೊಮ್ಮೆ ಕೈಗೊಳ್ಳಬೇಕು, ಅದು ಬಿಟ್ಟು ಪ್ರತಿವರ್ಷ ತಮ್ಮ ಮನಬಂದಂತೆ ತೆರಿಗೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕನ್ನು ಸಂಕಷ್ಟಕ್ಕೆ ಸಿಲುಕಿಸುವುದು ನ್ಯಾಯಸಮ್ಮತವಲ್ಲ. ನೆರೆಯ ಮಹಾರಾಷ್ಟ್ರದ ಸೋಲಾಪುರ ಮಹಾನಗರ ಪಾಲಿಕೆ ಅಲ್ಲಿನ ಜನರ ಬೇಡಿಕೆಗೆ ಸ್ಪಂಧಿಸಿ ಹೆಚ್ಚಿಸಿರುವ ತೆರಿಗೆಯನ್ನು ಕೈಬಿಟ್ಟಿರುತ್ತದೆ ಇದೇ ಮಾದರಿಯಲ್ಲಿ ಇಲ್ಲಿಯೂ ತೆರಿಗೆ ಹೆಚ್ಚಳವನ್ನು ತಕ್ಷಣವೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಅವರೊಂದಿಗೆ ನಾರಾಯಣರಾವ ಕಾಳೆ, ಬಾಬುರಾವ ಜಾಗಿರದಾರ, ಜಗನ್ನಾಥ ಗೋದಿ, ಸಿಎ ಪಾಟೀಲ, ನಿಲಕಂಠರಾವ ಮೂಲಗೆ, ಬಾಬು ಒಂಟಿ, ಲಾಲ ಅಹ್ಮದ ಸೇಟ, ಧರ್ಮರಾಜ ಹೇರೂರ, ಮೊದಿನ ಪಟೇಲ ಸೇರಿದಂತೆ ಹಲವರಿದ್ದರು.