ಮಹಾನಗರ ಪಾಲಿಕೆ ಉರ್ದು ನಾಮಫಲಕ ತೆರವುಗೊಳಿಸಲು ಆಯುಕ್ತರಿಗೆ ಸೂಚನೆ

ಕಲಬುರಗಿ:ಆ.02: ಈ ಹಿಂದೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮಹಾನಗರ ಪಾಲಿಕೆಯ ಉರ್ದು ನಾಮಫಲಕ ತೆರವುಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದೆ.
ನಾಮಫಲಕ ತೆರವುಗೊಳಿಸುವ ಕುರಿತು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ್ ಅವರು, ಉರ್ದು ನಾಮಫಲಕವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಸರ್ಕಾರಿ ಕಚೇರಿ ಹಾಗೂ ಸಂಸ್ಥೆಯ ಕಟ್ಟಡಗಳ ಮೇಲೆ ಕನ್ನಡವನ್ನು ಹೊರತುಪಡಿಸಿ ಅನ್ಯ ಭಾಷೆಯ ನಾಮಫಲಕ ಅಳವಡಿಸಕೂಡದು ಎಂದು ಆ ಮಪತ್ರದಲ್ಲಿ ತಿಳಿಸಲಾಗಿದೆ.
ಈ ಹಿಂದೆ ನಾಮಫಲಕ ತೆರವುಗೊಳಿಸಿದಾಗ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಲವು ಮುಸ್ಲಿಂ ಸಂಘಟನೆಗಳು ರಸ್ತೆಗಿಳಿದು ಹೋರಾಟ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕನ್ನಡಪರ ಸಂಘಟನೆಗಳು ಸಹ ಉರ್ದು ನಾಮಫಲಕ ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿದ್ದವು. ಪರ, ವಿರೋಧ ನಡುವೆಯೂ ಮತ್ತೆ ಉರ್ದು ನಾಮಫಲಕವನ್ನು ಅಳವಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಉರ್ದು ನಾಮಫಲಕವನ್ನು ತೆರವುಗೊಳಿಸಲು ಆದೇಶಿಸಿದ್ದು, ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.