ಮಹಾನಗರ ಪಾಲಿಕೆ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಕಲಬುರಗಿ,ಆ.31-ಇಲ್ಲಿನ ಮಹಾನಗರ ಪಾಲಿಕೆ ಆಡಳಿತ ಕಚೇರಿಯ ಉಪ ಆಯುಕ್ತರ ಕಚೇರಿಯಲ್ಲಿ ಆರೋಗ್ಯ ನಿರೀಕ್ಷಕರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಟ್ರೇಡ್ ಲೈಸೆನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ನಿರೀಕ್ಷಕ ಧನಶೆಟ್ಟಿ ಅವರ ಮೇಲೆ ಅವಿನಾಶ ಭಾಸ್ಕರ್ ಮತ್ತು ರಾಜು ಎಂಬುವವರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಮಹಾನಗರ ಪಾಲಿಕೆಯ ಹಲವು ಕಾಂಟ್ರ್ಯಾಕ್ಟ್ ಕೆಲಸಗಳನ್ನು ಅವಿನಾಶ ಭಾಸ್ಕರ್ ಮಾಡುತ್ತಿದ್ದು, ಅದರಂತೆ ಪಾಲಿಕೆಗೆ ವಾಹನ ಬಾಡಿಗೆ ನೀಡಿದ್ದ. ಬುಧವಾರ ಮಧ್ಯಾಹ್ನ ದೂರವಾಣಿ ಮುಖಾಂತರ ಧನಶೆಟ್ಟಿ ಅವರಿಗೆ ನಿಂದಿಸಿ ಸ್ನೇಹಿತ ರಾಜು ಜೊತೆ ಕಚೇರಿಗೆ ಬಂದು ಜೋರಾಗಿ ಮಾತಾಡಿ ಹಲ್ಲೆಯೂ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪ್ರತಿಭಟನೆ
ಆರೋಗ್ಯ ನಿರೀಕ್ಷಕ ಧನಶೆಟ್ಟಿ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ದೀಪಕ್ ಚವ್ಹಾಣ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮುಂದೆ ಇಂದು ಪ್ರತಿಭಟನೆ ನಡೆಸಿ ನಂತರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪಾಲಿಕೆ ಅಧಿಕಾರಿ ಧನಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.