ಮಹಾದೇವ ಸಾಹುಕಾರ ಮೇಲೆ ಶೂಟೌಟ್ ಪ್ರಕರಣಃ ಪ್ರಕರಣ ಬೇಧಿಸಲು 10ಕ್ಕೂ ಹೆಚ್ಚು ಪೊಲೀಸ್ ತಂಡಗಳ ರಚನೆ

ವಿಜಯಪುರ, ನ.5-ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂ ಬಂಧಿಸಿದಂತೆ ವಿಜಯಪುರ ಪೊಲೀಸರು ಹೈ ಅಲರ್ಟ್ ಆಗಿದ್ದು, ನಿನ್ನೆ ವಿಜಯಪುರಕ್ಕೆ ಆಗಮಿಸಿದ್ದ ಬೆಳಗಾವಿ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ವಿಜಯಪುರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ವಿಜಯಪುರಕ್ಕೆ ಆಗಮಿಸಿದ್ದ ಐಜಿ ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಅಲ್ಲದೇ, ಎಷ್ಟು ಬೇಕೋ ಅಷ್ಟು ಸಿಬ್ಬಂದಿಯನ್ನು ಬಳಸಿ ಘಟನಾ ಸ್ಥಳದಲ್ಲಿ ಇಂಚಿಂಚೂ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದರು. ಅಲ್ಲಿಂದ ಮರಳಿದ ಬಳಿಕ ವಿಜಯಪುರ ದಲ್ಲಿಯೇ ಠಿಕಾಣಿ ಹೂಡಿದ ಐಜಿ ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ವಿಜಯಪುರ ಪೊಲೀಸರಿಗೆ ಹಲವಾರು ರೀತಿಯಲ್ಲಿ ತನಿಖೆ ನಡೆಸುವ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ, ವಿಜಯಪುರ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಶೂಟೌಟ್ ಸಂದರ್ಭದಲ್ಲಿ ಎರಡೂ ಕಡೆಯಿಂದ 17 ಸುತ್ತು ಗುಂಡಿನ ದಾಳಿ ನಡೆದಿದೆ. ಘಟನಾ ಸ್ಥಳದಲ್ಲಿ 8 ಸುತ್ತು ಖಾಲಿ ಗುಂಡುಗಳು, 5 ಜೀವಂತ ಗುಂಡುಗಳು ಮತ್ತು ಮಹಾದೇವ ಸಾಹುಕಾರ ಭೈರಗೊಂಡ ಸಂಚರಿಸುತ್ತಿದ್ದ ಕಾರಿನಲ್ಲಿ 4 ಖಾಲಿ ಗುಂಡುಗಳು ಪತ್ತೆಯಾಗಿವೆ. ಹೀಗಾಗಿ ಒಟ್ಟು 17 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಮತ್ತೊಂದೆಡೆ ನಾನಾ ಪೊಲೀಸ್ ಅಧಿಕಾರಿಗಳ ತಂಡಗಳು ಹಲವಾರು ಆಯಾಮಗಳಲ್ಲಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಸಂಪೂರ್ಣ ತನಿಖೆಗೆ ಸುಮಾರು 10ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು, ಒಂದೊಂದು ತಂಡಕ್ಕೆ ಒಂದೊಂದು ಜವಾಬ್ದಾರಿಯನ್ನು ನೀಡಲಾಗಿದೆ.
ಎಲ್ಲಾ ಪೊಲೀಸ್ ತಂಡಗಳೂ ಕಳೆದ ಮೂರು ದಿನಗಳಿಂದ ನಾನಾ ಕಡೆ ತೆರಳಿ ತನಿಖೆ ಕೈಗೊಂಡಿವೆ. ಈಗಗಾಲೇ ಆರೇಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಪ್ರಮುಖ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಮುಂದುವರಿಸಲಾಗಿದೆ. ಈ ಮಧ್ಯೆ ವಿಜಯಪುರ ಜಿಲ್ಲೆಯ 1500 ಜನ ಪೊಲೀಸರನ್ನು ಈ ಪ್ರಕರಣ ತನಿಖೆಯಲ್ಲಿ ಬಳಸಲಾಗುತ್ತಿದ್ದು, ಒಂದೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸಮಾಜ ವಿರೋಧಿ ಚಟುವಟಿಕೆ ನಡೆಸುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಐಜಿ ರಾಘವೇಂದ್ರ ಸುಹಾರ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಕರಣ ತನಿಖೆಗೆ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ನೇತೃತ್ವದಲ್ಲಿ 10ಕ್ಕೂ ಹೆಚ್ಚು ತಂಡಗಳ ರಚನೆ ಮಾಡಲಾಗಿದ್ದು, ಹಂತಕರ ಪತ್ತೆಗೆ 37 ಇನಸ್ಟೆಕ್ಟರಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಘಟನೆ ನಡೆದ ಸ್ಥಳದ ಸುತ್ತಲೂ 3 ಕೀ.ಮೀ ವ್ಯಾಪ್ತಿಯಲ್ಲಿ ಪೊಲೀಸರಿಂದ ಸಾಕ್ಷಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಭೀಮಾ ತೀರದ ಚಡಚಣ, ಕೆರೂರು, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ದಿನವಿಡೀ ಪೊಲೀಸರ ನಾನಾ ತಂಡಗಳು ಗಸ್ತು ತಿರುಗುತ್ತಿವೆ.