ಮಹಾದೇವ ಜಾತ್ರೆಯಲ್ಲಿ ಹರಿದ ಗಾನಸುಧೆ

ಬೀದರ್: ಎ.7:ಮಹಾದೇವ ಜಾತ್ರಾ ಮಹೋತ್ಸವ ಪ್ರಯುಕ್ತ ಶಿವಲಿಂಗೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಗಾನ ಸುಧೆ ಹಾಗೂ ಹಾಸ್ಯದ ಹೊನಲು ಹರಿಯಿತು.

ಕಲಾವಿದ ನಾಗರಾಜ ಜೋಗಿ ನೇತೃತ್ವದ ಸ್ಫೂರ್ತಿ ಮೆಲೋಡೀಸ್‍ನ ತಂಡ ಭಕ್ತಿ ಗೀತೆಗಳ ಸವಿ ಉಣಬಡಿಸಿತು. ತಂಡದ ಇಂಪಾದ ಗಾಯನ ನೆರೆದವರು ತಲೆದೂಗಿಸುವಂತೆ ಮಾಡಿತು.

‘ಹರ ಹರ ಶಂಭು, ಶಂಭು, ದೇವ ಮಹಾದೇವ ಶಂಭು…’, ‘ಸೋಜುಗಾದ ಸೂಜು ಮಲ್ಲಿಗೆ’, ‘ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೆ ರಾಜಕುಮಾರ’ ಮೊದಲಾದ ಹಾಡುಗಳು ಪುಳಕಿತಗೊಳಿಸಿದವು.

ತಂಡ ಪ್ರೇಕ್ಷಕರ ಅಭಿಲಾಷೆ ಮೇರೆಗೆ ಪ್ರಸ್ತುತಪಡಿಸಿದ ‘ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೆ ರಾಜಕುಮಾರ’ ಹಾಡಿಗೆ ಪ್ರೇಕ್ಷಕರು ಮೊಬೈಲ್ ಟಾರ್ಚ್ ಆನ್ ಮಾಡಿ ನಟ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿದರು.

ಕಲಾವಿದ ರಾಚಯ್ಯ ಸ್ವಾಮಿ ನಗೆ ಚಟಾಕಿಗಳನ್ನು ಹಾರಿಸಿ, ಸಭಿಕರನ್ನು ನಕ್ಕು ನಲಿಸಿದರು. ತುಕಾರಾಮ ಭೋಲಾ ಅವರ ಜಾದೂ ಪ್ರದರ್ಶನ ಎಲ್ಲರನ್ನು ಬೆರಗುಗೊಳಿಸಿತು.

ಕಾರ್ಯಕ್ರಮ ಉದ್ಘಾಟಿಸಿದ ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ ಮಾತನಾಡಿ, ಮಹಾದೇವ ಜಾತ್ರೆಯನ್ನು ಪ್ರತಿ ವರ್ಷ ವೈಭವದಿಂದ ಆಚರಿಸಿಕೊಂಡು ಬರುತ್ತಿರುವ ಮುಧೋಳ (ಬಿ) ಗ್ರಾಮಸ್ಥರ ಧಾರ್ಮಿಕ ಶ್ರದ್ಧೆ ಶ್ರೇಷ್ಠವಾಗಿದೆ ಎಂದರು.

ಗ್ರಾಮದೊಂದಿಗೆ ನಿಕಟ ಬಾಂಧವ್ಯ ಹೊಂದಿದೆ. ಕೋವಿಡ್ ಸಂದರ್ಭದಲ್ಲಿ ಗ್ರಾಮದಲ್ಲಿ ಆಹಾರ ಧಾನ್ಯ ಕಿಟ್, ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಅಳಿಲು ಸೇವೆ ಸಲ್ಲಿಸಿದ್ದೇನೆ. ನನ್ನ ಸಾಮಾಜಿಕ ಸೇವೆಯನ್ನು ಬರುವ ದಿನಗಳಲ್ಲೂ ಮುಂದುವರಿಸಲಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಒದಗಿ ಬರುವ ನಿರೀಕ್ಷೆ ಇದೆ. ಎಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು.

ಶಿವಲಿಂಗೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, ಮಹಾದೇವ ಮಂದಿರ ಎಲ್ಲರ ಶ್ರದ್ಧಾ ಕೇಂದ್ರವಾಗಿದೆ. ಸಂಸ್ಥೆಯ ವತಿಯಿಂದ ಮಹಾದೇವ ಜಾತ್ರೆಯನ್ನು ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಪ್ರತಿ ವರ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರ ಸಹಕಾರದಿಂದ ವಿವಿಧ ಸಾಮಾಜಿಕ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರವೀಂದ್ರ ಸ್ವಾಮಿ ಹಾಗೂ ಸೋಮನಾಥ ಮುಧೋಳ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಮಹೇಶ ಕೋಟೆ, ಸಂಜು ಪಾಟೀಲ, ಮಹೇಶ ಕಾಪಸೆ, ನಾಗೇಶ ಸ್ವಾಮಿ, ಪರಮೇಶ ಬಾವಗೆ, ಹನುಮಂತ ಮುಸ್ತಾಪುರೆ, ಲಕ್ಷ್ಮಣ ಕೇರಬಾ, ಶಶಿಕಾಂತ ಕೋಳಿ, ತುಕಾರಾಮ ಧನಗರ, ರಮೇಶ ಮೈಲಾರೆ, ರಾಜಕುಮಾರ ಹೊಡಗೆ, ಅನಿಲಕುಮಾರ ಹೊಡಗೆ, ಮಹಾದೇವ ಲಕಶೆಟ್ಟೆ, ಸಿದ್ದು ಸ್ವಾಮಿ, ನಾಗರಾಜ ಕಲಂಬುರೆ, ಗಣಪತಿ ಲಕ್ಕಶೆಟ್ಟೆ, ಪರಮೇಶ ಮೈಲಾರೆ, ಸಂತೋಷ ಹೊಡಗೆ, ಸುನೀಲ್ ವಾಡೆ, ರಾಜಕುಮಾರ ಹೊಡಗೆ, ಮಹೇಶ ವಾಡೆ ಮೊದಲಾದವರು ಇದ್ದರು.

ನಾಗನಾಥ ಶಂಖು ನಿರೂಪಿಸಿದರು. ಶಿವಕಾಂತ ಗುಡ್ಡಾ ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ಶಿವಲಿಂಗೇಶ್ವರ ಮಠದಿಂದ ಗ್ರಾಮದ ಮಹಾದೇವ ಮಂದಿರವರೆಗೆ ವೈಭವದ ಪಲ್ಲಕ್ಕಿ ಮೆರವಣಿಗೆ ಜರುಗಿತು.