ಮಹಾದೇವಪ್ಪ ಕಡೇಚೂರ ಜೀವನ ಪಠ್ಯ ಆಗಲಿ: ಗುಲ್ಬರ್ಗ ವಿವಿ ಉಪಕುಲಪತಿ ಅಗಸರ್ ಸಲಹೆ

ಕಲಬುರಗಿ ಜು 24: ಒಬ್ಬ ವ್ಯಕ್ತಿ ತಾನು ಮಾತ್ರ ಬೆಳೆಯದೆ ತನ್ನ ಸುತ್ತಲೂ ಇರುವ ಸಮಾಜವನ್ನು ಆದರ್ಶದ ಹಾದಿಯಲ್ಲಿ ಕರೆದೊಯ್ಯುವ ಮಹತ್ವದ ಕೆಲಸ ಮಾಡಿದರೆ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ದಯಾನಂದ ಅಗಸರ್ ನುಡಿದರು.
ಇಲ್ಲಿನ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ
ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮಹಾದೇವಪ್ಪ ಕಡೇಚೂರ ಅವರ ಗೌರವಾರ್ಥ ಅನನ್ಯ ಮಹಾದೇವ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಹಾದೇವಪ್ಪ ಕಡೇಚೂರ ಅವರ ಗೌರವಾರ್ಥ ಅನನ್ಯ ಮಹಾದೇವ ಅಭಿನಂದನಾ ಗ್ರಂಥದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಹೈದರಾಬಾದ್ ಸಂಸ್ಥಾನದ ವಿಮೋಚನೆ ಕುರಿತಾದ ಸಾಕಷ್ಟು ಪ್ರೇರಣಾದಾಯಕ ಅಂಶಗಳಿವೆ. ಹಾಗಾಗಿ, ಅಭಿನಂದನಾ ಗ್ರಂಥದಲ್ಲಿರುವ ಅಂಶಗಳನ್ನು ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜ್ಞಾನ ಸಮೃದ್ಧಿ ಹೆಚ್ಚಾಗಲು ಪೂರಕವಾಗಿ ಪಠ್ಯವನ್ನಾಗಿ ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾವು ಸಹ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಅವರು ಮಾತನಾಡುತ್ತಾ, ನಮ್ಮ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಉತ್ತಮ ಫಲಿತಾಂಶ ಖಂಡಿತ ಲಭಿಸುತ್ತದೆ. ಈ ಮಾತಿಗೆ ಅನುಗುಣವಾಗಿ ಮಹಾದೇವಪ್ಪ ಕಡೇಚೂರ ಅವರು ತಮ್ಮ ಜೀವನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಅನನ್ಯ ಮಹಾದೇವ ಅಭಿನಂದನಾ ಗ್ರಂಥವನ್ನು ಗ್ರಂಥಾಲಯ ಇಲಾಖೆಯಿಂದ ಖರೀದಿಸಿ ಇಡೀ ರಾಜ್ಯದ ಓದುಗರಿಗೆ ಲಭ್ಯವಾಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪೆÇ್ರ.ಕಲ್ಯಾಣರಾವ್ ಜಿ. ಪಾಟೀಲ್ ಅವರು ಅಭಿನಂದನಾ ಗ್ರಂಥ ಅನನ್ಯ ಮಹಾದೇವ ಕೃತಿಯ ಕುರಿತು ಮಾತನಾಡಿದರು.
ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ, ಆರ್.ಎಸ್.ಎಸ್. ಮುಖಂಡರಾದ ಖಗೇಶ ಪಟ್ಟಣಶೆಟ್ಟಿ, ಸುರೇಶ್ ಹೇರೂರ್, ಸಾಹಿತಿಗಳಾದ ಮಹಾದೇವಯ್ಯ ಕರದಳ್ಳಿ, ಚಿ.ಸಿ.ನಿಂಗಣ್ಣ, ಬಿಜೆಪಿ ಮುಖಂಡ ಶರಣಪ್ಪ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ದತ್ತಪ್ಪ ಸಾಗನೂರ, ಉದ್ಯಮಿ ವೆಂಕಟೇಶ ಕಡೇಚೂರ ವೇದಿಕೆಯಲ್ಲಿದ್ದರು.
ಗುಲ್ಬರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ನಿರ್ವಹಿಸಿದರು.
ಡಾ.ಪಿ.ಎಸ್.ಶಂಕರ, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಡಾ.ರಾಜೇಶ್ ಕಡೇಚೂರ, ಡಾ.ವಾಸುದೇವ ಸೇಡಂ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.