ಮಹಾದಾಸೋಹ ಸಂಸ್ಥಾನ, ವಿದ್ಯಾವರ್ಧಕ ಸಂಘ, ವಿಶ್ವವಿದ್ಯಾಲಯ ಅಭಿವೃದ್ಧಿಗೆ ಪತ್ನಿ ಕೊಡುಗೆ ಅವಿಸ್ಮರಣೀಯ: ಡಾ. ಅಪ್ಪಾ

ಕಲಬುರಗಿ:ಡಿ.26: ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಚೆರಪರ್ಸನ್ ಮತ್ತು ಜೀವನ ಸಂಗಾತಿ ಡಾ. ದ್ರಾಕ್ಷಾಯಿಣಿ ಅವರು ಶರಣಬಸವೇಶ್ವರ್ ಸಂಸ್ಥಾನ ಮತ್ತು ವಿದ್ಯಾವರ್ಧಕ ಸಂಘದ ಅಭಿವೃದ್ಧಿಗೆ ನೀಡಿದ ಕೊಡುಗೆ ಶ್ಲಾಘನೀಯವಾಗಿದೆ ಎಂದು ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಅವರು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ಹಲ್ಸೆ ಅವರು ಶನಿವಾರ ನಗರದ ದಾಸೋಹ ಮಹಾಮನೆಯಲ್ಲಿ ದ್ರಾಕ್ಷಾಯಿಣಿ ಮಾತೋಶ್ರೀ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ನಂತರ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ನನ್ನ ಎಲ್ಲ ಕೆಲಸಕಾರ್ಯಗಳಲ್ಲಿ ಬೆನ್ನೆಲುಬಾಗಿ ಹಾಗೂ ಧರ್ಮಪತ್ನಿಯಾಗಿ ಮತ್ತು ಸಂಸ್ಥಾನ, ಸಂಘ ಮತ್ತು ವಿಶ್ವವಿದ್ಯಾಲಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ 27 ವರ್ಷಗಳಿಂದ ಜೀವನ ಸಂಗಾತಿಯಾಗಿ ಬೆನ್ನು ಹಿಂದೆ ಬಂಡೆಯಂತೆ ನಿಂತು ಹುರಿದುಂಬಿಸಿದ್ದಾರೆ ಎಂದರು.
ಸಂಘ ಮತ್ತು ಸಂಸ್ಥಾನದ ಎಲ್ಲ ಚಟುವಟಿಕೆಗಳಲ್ಲಿ ನನ್ನೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಂಘದ ಅಧ್ಯಕ್ಷರಾಗಿ ಮತ್ತು ಡಾ. ಶರಣಬಸವಪ್ಪ ಅಪ್ಪಾ ಫ್ಯಾಮಿಲಿ ಟ್ರಸ್ಟ್‍ನ, ಶರಣಬಸವೇಶ್ವರ್ ಸಂಸ್ಥಾನದ ಟ್ರಸ್ಟಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸಂಸ್ಥಾನದ ಪ್ರತಿ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದಾರೆ ಎಂದು ಅವರು ತಮ್ಮ ಮನದನ್ನೆಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ನಮ್ಮ 200 ವರ್ಷ ಮೇಲ್ಪಟ್ಟ ಇತಿಹಾಸವುಳ್ಳ ಸಂಸ್ಥಾನದ 8 ತಲೆಮಾರಿನ ಶರಣಬಸವೇಶ್ವರ್ ಸಂಸ್ಥಾನದ ಅಲಿಖಿತ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2015ರಲ್ಲಿ ಟ್ರಸ್ಟ್ ಅನ್ನು ನೋಂದಾಯಿಸಲಾಯಿತು. ಮತ್ತು ಸಂಘ ಮತ್ತು ಸಂಸ್ಥಾನದ ಭವಿಷ್ಯದ ಅಭಿವೃದ್ಧಿಗೆ ಪತ್ನಿ ಡಾ. ದ್ರಾಕ್ಷಾಯಣಿ ಅವರನ್ನು ಶರಣರ ಸಂಸ್ಥಾನದ ಟ್ರಸ್ಟಿಯಾಗಿ ನೇಮಕಮಾಡಲಾಗಿದೆ ಎಂದು ಅವರು ಹೇಳಿದರು.
ಈ ದಿನವು ಡಾ. ದಾಕ್ಷಾಯಿಣಿಯವರ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿ ಉಳಿಯುತ್ತದೆ. ಅವರಿಗೆ ಪಿಎಚ್‍ಡಿ ಮಾಡುವ ಕನಸು ಈಡೇರಿಲ್ಲದಿದ್ದರೂ ಸಹ, ಮದುವೆಯಾದ ನಂತರ 27 ವರ್ಷಗಳಿಂದ ಸಂಘ ಮತ್ತು ಸಂಸ್ಥಾನದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ದಾವಣಗೆರೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ಅವರ ಕನಸನ್ನು ನನಸಾಗಿಸಿದೆ. ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಅದರ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಅವರು ತಿಳಿಸಿದರು.
ಆಂಧ್ರಪ್ರದೇಶದ ಸಾರಂಗಮಠದ ಶ್ರೀಶೈಲಂನ ಜಗದ್ಗುರು ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮಿಗಳು, ಹಾರಕೂಡದ ಡಾ.ಚೆನ್ನವೀರ ಶಿವಾಚಾರ್ಯರು, ಚೌಡಾಪೂರ್ ಮಠದ ಡಾ. ರಾಜಶೇಖರ್ ಶಿವಾಚಾರ್ಯರು, ಬೆಳಗುಂಪಿಯ ಸಿದ್ಧಮುನೇಂದ್ರ ಶಿವಾಚಾರ್ಯರು, ಲೋಕಾಸಭಾ ಸದಸ್ಯ ಡಾ. ಉಮೇಶ್ ಜಾಧವ್, ಶಾಸಕರಾದ ದತ್ತಾತ್ರೇಯ್ ಪಾಟೀಲ್ ರೇವೂರ್, ಎಂ.ವೈ. ಪಾಟೀಲ್, ಖನೀಜ್ ಫಾತಿಮಾ, ಬಸವರಾಜ್ ಮತ್ತಿಮೂಡ್, ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ಲೋಕಸಭಾ ಮಾಜಿ ಸದಸ್ಯ ಬಸವರಾಜ್ ಪಾಟೀಲ್ ಸೇಡಂ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಂಪ್ರಭು ಪಾಟೀಲ್, ಅಮರನಾಥ್ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ನವೀಕರಿಸಬಹುದಾದ ಇಂಧನ ಇಲಾಖೆಯ ನಿದೇರ್ಶಕ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಬಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ದಾವಣಗೆರೆ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಅನಿತಾ ಎಚ್.ಎಸ್. ಅವರು ಉಲ್ಲೇಖವನ್ನು ಓದಿದರೆ, ಕುಲಪತಿ ಡಾ. ಹಲ್ಸೆ ಅವರು ಮಾತೋಶ್ರೀಯವರಿಗೆ ಗೌರವ ಡಾಕ್ಟರೇಟ್ ನೀಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಕಲಾ ವಿಭಾಗದ ಡೀನ್ ಡಾ. ರಂಗಪ್ಪ, ಶರಣಬಸವೇಶ್ವರ್ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ವಿ. ನಿಷ್ಠಿ, ಸಮ ಕುಲಪತಿ ಪೆÇ್ರ. ವಿ.ಡಿ. ಮೈತ್ರಿ ಮತ್ತು ಎನ್.ಎಸ್. ದೇವರಕಲ್ ಕುಲಸಚಿವ ಡಾ. ಅನೀಲಕುಮಾರ್ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ್ ಶಾಸ್ತ್ರಿ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಮತ್ತು ಡಾ. ಬಸವರಾಜ್ ಮಠಪತಿ ಮುಂತಾದವರು ಉಪಸ್ಥಿತರಿದ್ದರು.