
ಕಲಬುರಗಿ,ಏ.11: ಮಹಿಳಾ ಶಿಕ್ಷಣಕ್ಕೆ ಪ್ರಯತ್ನ, ಸ್ತ್ರೀ-ಪುರುಷರ ನಡುವಿನ ಅಸಮಾನತೆ ನಿರ್ಮೂಲನೆ, ಜಾತಿ, ಧರ್ಮದ ಹೆಸರಿನ ಮೇಲೆ ನಡೆಯುತ್ತಿದ್ದ ವ್ಯಾಪಕವಾದ ಶೋಷಣೆ, ಮೌಢ್ಯತೆ, ಅಂಧಶೃದ್ಧೆ, ಅಸ್ಪøಷ್ಯತೆ ಹೋಗಲಾಡಿಸಲು ನಿರಂತರವಾಗಿ ಇಡೀ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆಯವರು ಶ್ರೇಷ್ಠ ಸಮಜ ಸುಧಾರಕರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಎಸ್.ಬಿ.ಕಾಲೇಜಿನ ಎದುರುಗಡೆಯಿರುವ ‘ಕೊಹಿನೂರ ಕಂಪೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಮಹಾತ್ಮ ಜ್ಯೋತಿಬಾ ಫುಲೆಯವರ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಕಾರ್ಯದರ್ಶಿ, ಪ್ರಾಚಾರ್ಯ ಭೀಮಾಶಂಕರ ಘತ್ತರಗಿ ಮಾತನಾಡಿ, ಬ್ರಿಟಿಷರ ಶೋಷಣೆಯಿಂದ ಸಾಮಾಜಿಕವಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದ ಸಂದರ್ಭವನ್ನು ಬಾಲ್ಯದಿಂದಲೇ ಕಂಡ ಫುಲೆಯವರು, ಮುಂದೆ ದೊಡ್ಡ ಪ್ರಮಾಣದ ಹೋರಾಟಕ್ಕೆ ಇದು ಸ್ಪೂರ್ತಿಯಾಯಿತು. ‘ಸತ್ಯ ಶೋಧಕ ಸಮಾಜ’ದ ಮೂಲಕ ಬಾಲ್ಯ ವಿವಾಹ, ವಿಧವೆಯರ ಶೋಷಣೆ ವಿರುದ್ಧ ಸಂಘಟಿತ ಹೋರಾಟ ಮಾಡಿದರು. ಶೋಷಿತ ಜನಾಂಗವು ಅನುಭವಿಸುತ್ತಿದ್ದ ಮೂಕ ರೋಧನೆಗೆ ಅವರು ಧ್ವನಿಯಾದರು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಮುಖ್ಯ ಸಿಕ್ಷಕ ದೇವೇಂದ್ರಪ್ಪ ಗಣಮುಖಿ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಸಂಸ್ಥೆಯ ಉಪನ್ಯಾಸಕರಾದ ಅಶ್ವಿನಿ ಜಿ.ಪಾಟೀಲ, ಅರ್ಚನಾ ಎಂ.ಹೀರಾಪೂರ್, ಪ್ರಮುಖರಾದ ರೂಪಾ ಹಡಪದ, ವಿಶಾಲ್ ಕೆ.ಝಾಪೂರ್, ಅಂಬಿಕಾ ಎಂ.ಕೋರೆ, ಐಶ್ವರ್ಯ ಎಂ.ಶೀಲಾರ್, ಸೇರಿದಂತೆ ಮತ್ತಿತರರು ಇದ್ದರು.