
ಅಥಣಿ: ಮಾ.11:ಜಾತ್ರೆ, ಉತ್ಸವಗಳು ಭಾವೈಕ್ಯತೆಯ ಸಂಕೇತವಾಗಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮತ್ತು ಮಹಾತ್ಮರ ಸಂದೇಶಗಳನ್ನು ಆಲಿಸುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ದೊರಕುವುದಲ್ಲದೆ ನಮ್ಮ ಬದುಕು ಸುಂದರವಾಗುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ತಾಲೂಕಿನ ಐಗಳಿ ಕ್ರಾಸ್ ಮಾಣಿಕ ನಗರ ವಿರಕ್ತಮಠದ ಶ್ರೀ ರಾಚೋಟೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಹಾತಪಸ್ವಿ ಮಾಣಿಕಪ್ರಭು ಶಿವಯೋಗಿಗಳು ಈ ನಗರವನ್ನು ಪಾವನಗೊಳಿಸುವುದರ ಜೊತೆಗೆ ವಿರಕ್ತ ಮಠದ ಪರಂಪರೆಯ ಮೂಲಕ ಅನೇಕ ಜನರನ್ನ ಉದ್ದರಿಸಿದ್ದಾರೆ. ಅಂತಹ ಮಹಾತ್ಮರ ನಡೆ ನುಡಿ ನಮ್ಮೆಲ್ಲರಿಗೆ ದಾರಿದೀಪವಾಗಬೇಕು. ಜಾತ್ರಾ ಉತ್ಸವದ ಅಂಗವಾಗಿ ನಡೆಯುವ ಇಂತಹ ಚಿಂತನಾಗೋಷ್ಠಿಯಲ್ಲಿ ಪೂಜ್ಯರ ಸಂದೇಶಗಳು ನಮ್ಮ ಬಾಳಿಗೆ ಬೆಳಕಾಗಬೇಕು ಎಂದು ಹೇಳಿದ ಅವರು ಭಾರತ ಇಂದು ವಿಶ್ವಗುರು ಸ್ಥಾನದಲ್ಲಿ ಪ್ರಗತಿ ಹೊಂದುತ್ತಿದೆ. ಸ್ವಾಮಿ ವಿವೇಕಾನಂದರಂತೆ ಅನೇಕ ಪೂಜ್ಯರು ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಯುವಕರ ದೇಶ ಎಂದು ಕರೆಯಲ್ಪಡುವ ನಮ್ಮ ಭಾರತ ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿದೆ. ಇಂದಿನ ಧಾರ್ಮಿಕ ಸಭೆಯಲ್ಲಿ ಯುವಯತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ನನಗೆ ಖುಷಿ ತಂದಿದೆ. ಇಂತಹ ಯುವ ಯತಿಗಳಿಂದ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಸಂದೇಶ ಇನ್ನಷ್ಟು ಗಟ್ಟಿಯಾಗಬೇಕು. ಧಾರ್ಮಿಕ ಕಾರ್ಯಗಳಲ್ಲಿ ಯಾವುದೇ ರಾಜಕೀಯ ಮಾಡಬಾರದು. ರಾಜಕೀಯ ಕಾರ್ಯಗಳಲ್ಲಿ ಧಾರ್ಮಿಕ ಸಂದೇಶ ಇರಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕವಲಗುಡ್ಡ ಹಣಮಾಪುರ ಸಿದ್ದಾಶ್ರಮದ ಅಮರೇಶ್ವರ ಮಹಾರಾಜರು ಮಾತನಾಡಿ ಪ್ರತಿಯೊಬ್ಬರೂ ನಿಷ್ಠೆಯಿಂದ ಕಾಯಕ ಮಂತ್ರ ರೂಡಿಸಿಕೊಳ್ಳಬೇಕು. ರೈತಾಪಿ ಜನರು ಸಾವಯುವ ಕೃಷಿಯ ಜೊತೆಗೆ ಕಾಮಧೇನು ಎನಿಸಿಕೊಂಡಿರುವ ಆಕಳುಗಳನ್ನು ಸಾಕುವ ಮೂಲಕ ಸುಧಾರಿತ ಕೃಷಿಯನ್ನ ಕೈಗೊಳ್ಳಬೇಕು. ಆರೋಗ್ಯವಂತ ಸಮಾಜವನ್ನು ಕಟ್ಟುವ ಮೂಲಕ ಸದೃಢ ಭಾರತವನ್ನು ಕಟ್ಟುವಲ್ಲಿ ಕೈಜೋಡಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ತಾಳಿಕೋಟಿಯ ಸಿದ್ದಲಿಂಗ ದೇವರು ಮಾತನಾಡಿ ಜಗತ್ತನ್ನ ಗೆಲ್ಲಬೇಕಾದರೆ ಇನ್ನೊಬ್ಬರ ಮೇಲೆ ದಾಳಿ ನಡೆಸುವುದಲ್ಲ, ದ್ವೇಷಕ್ಕಿಂತ ಪ್ರೀತಿ ಹರಿಸಿದಾಗ ಜಗತ್ತನ್ನ ಗೆಲ್ಲಬಹುದು. ನಮ್ಮ ನಿತ್ಯ ಬದುಕಿಗೆ ಬೆಳ್ಳಿ ಬಂಗಾರ, ಹಣ, ಹೊಲ ಮನೆ ಇನ್ನಿತರ ಸಂಪತ್ತು ಮುಖ್ಯವಲ್ಲ, ಜೀವನದಲ್ಲಿ ನೆಮ್ಮದಿ, ಆರೋಗ್ಯವಂತ ಬದುಕು ನಿಜವಾದ ಸಂಪತ್ತು. ಅಂತಹ ಸಂಪತ್ತು ಗಳಿಸಬೇಕಾದರೆ ಇಂತಹ ಜಾತ್ರೆಗಳಲ್ಲಿ, ಧರ್ಮ ಕಾರ್ಯಗಳಲ್ಲಿ ತಮ್ಮನ ತೊಡಗಿಸಿಕೊಂಡು ಬದುಕನ್ನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.ಶಾಸಕ ಮಹೇಶ ಕುಮಟಳ್ಳಿ ಮತ್ತು ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡಿ ಮಾತನಾಡಿದರು ಐಗಳಿ ಮತ್ತು ಕಡಪಟ್ಟಿ ವಿರಕ್ತ ಮಠದ ಅಭಿನವ ರಾಚೋಟೇಶ್ವರ ದೇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ವಿವಿಧ ಸೇವಾ ದಾಸೋಹಿಗಳಿಗೆ ಜಾತ್ರಾ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕಡಪಟ್ಟಿಯ ಮಾತೋಶ್ರೀ ಪ್ರಮೀಳಾತಾಯಿ ಸೇರಿದಂತೆ ಅನೇಕ ಪೂಜ್ಯರು, ಗಣ್ಯರು ಉಪಸ್ಥಿತರಿದ್ದರು. ಜಾತ್ರಾ ಕಮಿಟಿಯ ಅಧ್ಯಕ್ಷ ಪ್ರಹ್ಲಾದ್ ಪಾಟೀಲ ಸ್ವಾಗತಿಸಿದರು. ಎಸ್ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು.