ಮಹಾತ್ಮರ ಜೀವನ ಶೈಲಿ ಅಳವಡಿಸಿಕೊಳ್ಳಲು ಕರೆ

ಕೆಂಭಾವಿ:ಜ.5:ಮಹಾತ್ಮರ ಜೀವನ ಶೈಲಿಯನ್ನು ನಮ್ಮಲ್ಲಿ ಅಳವಡಿಸಿಕೊಂಡು, ಅವರ ಆಚಾರ ವಿಚಾರ ಅನುಸರಿಸಿ ಮುನ್ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಸರೂರ ಅಗತೀರ್ಥ ಹಾಲುಮತ ಗುರುಪಿಠದ ಪೂಜ್ಯ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪವಾಡ ಪುರುಷ ಶ್ರೀ ಕರೆಪ್ಪ ತಾತನವರ 10ನೇ ವರ್ಷದ ಪುಣ್ಯಾರಾಧನೆ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸರೂರ ಅಗತೀರ್ಥ ಹಾಲುಮತ ಗುರುಪೀಠದ ಪೂಜ್ಯ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿ ಸ್ವಾರ್ಥವನ್ನು ಬಯಸದೆ ನಿಸ್ವಾರ್ಥದಿಂದ ಸಮಾಜ ಸೇವೆಯನ್ನು ಮಾಡಿ ಮನ ಕುಲದ ಉದ್ಧಾರಕ್ಕಾಗಿ, ಭಕ್ತರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾತ್ಮರ ಸಾಲಿನಲ್ಲಿ ಶ್ರೀ ಕರೆಪ್ಪ ತಾತನವರು ಕೂಡ ಒಬ್ಬರು. ನೀರಿನಿಂದ ಎಣ್ಣೆಯನ್ನು ಮಾಡಿ ದೀಪವನ್ನು ಬೆಳಗಿಸಿದ ಮಹಾನ್ ಪುರುಷರಾಗಿದ್ದರು. ಭಕ್ತರು ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾಗ ಕಂಬಳಿ ಬಿಸಿ ಮಳೆರಾಯನನ್ನು ಧರೆಗಿಳಿಸಿ ಒಳಿತನ್ನು ಮಾಡಿರುವ ಹಲವಾರು ಉದಾರಣೆಗಳು ನಮ್ಮ ಕಣ್ಣು ಮುಂದೆ ಇವೆ. ಅಂಥ ಮಹಾತ್ಮರ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ತಾವುಗಳು ಭಾಗಿಯಾಗುರುವುದು ಒಂದು ಪುಣ್ಯದ ಕೆಲಸ ಎಂದು ಹೇಳಿದರು.

ವಿಶೇಷ ಉಪಾನ್ಯಾಸ ನೀಡಿ ಮಾತನಾಡಿದ ಶಿಕ್ಷಕ ಸಿದ್ದಣ್ಣ ಧನಗೊಂಡ ಅವರು ಕೊರೋನಾ ಸಂಕಷ್ಟದ ಮಧ್ಯೆಯೇ ಆಧುನಿಕ ಜೀವನ ಶೈಲಿಯಿಂದ ಕೂಡಿದ ಒತ್ತಡ ಭರಿತ ಜೀವನದಿಂದ ನಾವುಗಳು ಮುಕ್ತರಾಗಬೇಕಾದರೆ ಮಹಾತ್ಮರ ಪಣ್ಯಾರಾಧನೆ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಶ್ರೀ ಸೂಗೂರೇಶ್ವರ ಸಂಸ್ಥಾನ ಹಿರೇಮಠದ ಷ.ಬ್ರ. ಸೂಗೂರೇಶ್ವರ ಶಿವಾಚಾರ್ಯರು, ಶ್ರೀ ಶರಣಬಸವೇಶ್ವರ ದಾಸೋಹ ಮಠದ ಪೂಜ್ಯ ಶರಣಪ್ಪ ಶರಣರು, ಭೋವಿ ಕಾಡಮಗೇರದ ಪೂಜ್ಯ ನಿಂಗಯ್ಯ ಗುರುಗಳು ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ನಗರೇಶ್ವರ ದೇವಸ್ಥಾನದ ಪಟ್ಟಾಧಿಕಾರಿ ಪೂಜ್ಯ ಖಂಡಪ್ಪ ತಾತನವರು ವಹಿಸಿದ್ದರು. ಪೂಜ್ಯ ದೊಡ್ಡಪ್ಪ ತಾತನವರು, ಯಾಳಗಿ ಸಿದ್ಧರಾಯ ದೇವಸ್ಥಾನದ ಸಿದ್ದಪ್ಪ ಪೂಜಾರಿ, ಕಕ್ಕಸಗೇರದ ಭೀಮರಾಯ ಪೂಜಾರಿ, ಕಾಡಮಗೇರದ ಕೆಂಚಪ್ಪ ಪೂಜಾರಿ, ಕೆಂಭಾವಿಯ ಭೀರಪ್ಪ ಪೂಜಾರಿ, ಗುರಪ್ಪಗೌಡ ಪೊಲೀಸ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಶಿವರಾಜ ಸಾಹು ಬುದೂರ, ಸುಬ್ಬಣ್ಣ ದೊರೆ ಕಕ್ಕಸಗೇರಾ, ಯಂಕಾರಡ್ಡಿ ಬುದ್ನೂರ ಸೇರಿದಂತೆ ನಗನೂರ ಖಾನಾಪುರ ( ಎಸ್.ಕೆ) ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೂತನ ಸದಸ್ಯರಾಗಿ ಆಯ್ಕೆಯಾದ ಸರ್ವ ಸದಸ್ಯರಿಗೆ ಪೂಜ್ಯ ಖಂಡಪ್ಪ ತಾತಾನವರು ಹಾಗೂ ದೊಡ್ಡಪ್ಪ ತಾತನವರು ಸನ್ಮಾನಿಸಿ ಗೌರವಿಸಿದರು.

ಖ್ಯಾತ ಗಾಯಕ ಬಸವರಾಜ ಭಂಟನೂರ, ತಬಲವಾದಕ ಯಮನೇಶ, ಯಾಳಗಿ ಶರಣಪ್ಪ ಖಾನಪುರ ಸಂಗೀತ ಸೇವೆ ನೀಡಿದರು. ನಂತರ ಅಕ್ಕಲಕೋಟ ತಾಲ್ಲೂಕಿನ ಬಸವನ ಸಂಗೊಳಗಿ ಗ್ರಾಮದ ಶ್ರೀ ಸೋಮೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಜತ್ತ ತಾಲ್ಲೂಕಿನ ಸೋನ್ಯಾಳ ಗ್ರಾಮದ ಶ್ರೀ ವಿಜಯ ವಿಠ್ಠಲ ಡೊಳ್ಳಿನ ಗಾಯನ ಸಂಘದ ವತಿಯಿಂದ ರಾತ್ರಿ ಡೊಳ್ಳಿನ ಹಾಡಿಕೆ ಕಾರ್ಯಕ್ರಮ ಜರಗಿತು.

ನಾಗಭೂಷಣ ಪತ್ತಾರ ಸ್ವಾಗತಿಸಿದರು, ಶರಣಕುಮಾರ ಆಲ್ಯಾಳ ನಿರೂಪಿಸಿದರು. ನಿಂಗಣ್ಣ ವಣಿಕ್ಯಾಳ ವಂದಿಸಿದರು.