ಮಹಾತ್ಮನಿಗೆ ವಿಶ್ವ ನಮನ

ಜಿ-೨೦ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿಶ್ವ ನಾಯಕರು ಬರಿಗಾಲಿಲ್ಲಿ ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರರು ಇದ್ದಾರೆ.

ನವದೆಹಲಿ,ಸೆ.೧೦- ಜಿ-೨೦ ಶೃಂಗಸಭೆಯಲ್ಲಿ ಭಾಗಿಯಾಗಿರುವ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವನಾಯಕರು ಜಿ-೨೦ ಶೃಂಗಸಭೆಯ ಎರಡನೇ ದಿನವಾದ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕ “ರಾಜ್‌ಘಾಟ್”ಗೆ ತೆರಳಿ ಶ್ರದ್ದಾಂಜಲಿ ಸಲ್ಲಿಸಿದರು.
ಇದೇ ವೇಳೆ ಒಂದು ಭವಿಷ್ಯ ವಿಚಾರ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದ್ದು ಸಭೆಯ ಅಂತ್ಯದಲ್ಲಿ ನಿರ್ಣಯಮಂಡನೆ , ಒಪ್ಪಿಗೆ ಹಾಗೂ ಮುಂದಿನ ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರಿಸಲಾಗುತ್ತದೆ.
ಮಹಾತ್ಮಾ ಗಾಂಧಿ ಅವರ ನೆಚ್ಚಿನ ಹಾಡು ‘ವೈಷ್ಣವ್ ಜಾನ್ ತೋ’ ಪ್ರದರ್ಶನವಾಗುತ್ತಿದ್ದ ಸಮಯದಲ್ಲಿ ಜೋ ಬೈಡನ್, ರಿಷಿ ಸುನಕ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಜಿ-೨೦ ನಾಯಕರು ಬರಿಗಾಲಿನಲ್ಲಿ ನಮನ ಸಲ್ಲಿಸಿದ್ದು ಗಮನಸೆಳೆಯಿತು.
ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಮಹಾತ್ಮ ಗಾಂಧಿ ಅವರ ಸ್ಮಾರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಧಾನಿ ಸ್ವಾಗತ:
ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರಿಗೆ ನಮಿಸಲು ರಾಜ್‌ಘಾಟ್‌ಗೆ ಆಗಮಿಸಿದ ಜಿ-೨೦ ಮುಖ್ಯಸ್ಥರು ಸೇರಿದಂತೆ ವಿಶ್ವನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಸ್ವಾಗತ ಕೋರಿ ಖಾದಿ ಉಡುಗೊರೆಯ ಶಲ್ಯ ಹಾಕಿ ಗೌರವಿಸಿದರು.
ರಾಜ್ ಘಾಟ್‌ನಿಂದ ಜಿ-೨೦ ಶೃಂಗಸಭೆ ನಡೆಯುವ ಭಾರತ ಮಂಟಪದಲ್ಲಿ ವಿಶ್ವನಾಯಕರು ಸಸಿ ನೆಟ್ಟರು. ನಂತರ ಜಿ೨೦ ಶೃಂಗಸಭೆಯ ಮೂರನೇ ಅಧಿವೇಶನ ’ಒಂದು ಭವಿಷ್ಯ’ದಲ್ಲಿ ನಾಯಕರು ಭಾಗವಹಿಸಿದರು.
ಬಿಗಿ ಭದ್ರತೆ
ಜಿ-೨೦ ಶೃಂಗಸಭೆಯ ಎರಡನೇ ದಿನವಾದ ಇಂದು ವಿವಿಧ ಭಾಗಗಳಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು.
ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ದೆಹಲಿ ಟ್ರಾಫಿಕ್ ಪೊಲೀಸರು “ಪೊಲೀಸ್ ನಿಯಂತ್ರಿತ ವಲಯ ೨ ಅನ್ನು ಜಾರಿಮಾಡಿದ್ದರು
ಇದರ ಪರಿಣಾಮವಾಗಿ, ರಿಂಗ್ ರಸ್ತೆಯಲ್ಲಿ ಬಸ್ಸುಗಳು ಕಾರ್ಯನಿರ್ವಹಿಸುವುದಿಲ್ಲ. ಕಾಶ್ಮೀರಿ ಗೇಟ್ ಮತ್ತು ಸರಾಯ್ ಕಾಲೆ ಖಾನ್ ನಡುವೆ ಯಾವುದೇ ಸಂಚಾರಕ್ಕೆ ಅನುವು ಮಾಡಿಕೊಟ್ಟಿರಲಿಲ್ಲ. ವಿಶ್ವನಾಯಕರ ದಂಡು ದೆಹಲಿ ಇರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದ್ದಾರೆ.
ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರು ಧೌಲಾ ಕುವಾನ್ ಬದಲಿಗೆ ರಾವ್ ತುಲಾ ರಾಮ್ ಮಾರ್ಗದ ಮೂಲಕ ಸಂಚರಿಸಲು ಅನುವ ಮಾಡಿಕೊಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಇತರರೊಂದಿಗೆ ಶೃಂಗಸಭೆಯಲ್ಲಿ ಮ್ಯಾಕ್ರನ್ ದ್ವಿಪಕ್ಷೀಯ ಸಭೆ ನಡೆಸಿದರು.

ಗಾಂಧಿ ಆದರ್ಶ :ಮೋದಿ
ಜಿ-೨೦ ವಿಶ್ವನಾಯಕರು ರಾಜ್‌ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿ ಗುಣಗಾನ ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಶಾಂತಿ, ಸೇವೆ, ಸಹಾನುಭೂತಿ ಮತ್ತು ಅಹಿಂಸೆಯ ದಾರಿ. ವೈವಿಧ್ಯಮಯ ರಾಷ್ಟ್ರಗಳು ಒಮ್ಮುಖವಾಗುತ್ತಿದ್ದಂತೆ, ಗಾಂಧೀಜಿ ಅವರ ಟೈಮ್‌ಲೆಸ್ ಆದರ್ಶಗಳು ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ಸಾಮೂಹಿಕ ದೃಷ್ಟಿಗೆ ಮಾರ್ಗದರ್ಶನ ನೀಡುತ್ತವೆ ಎಂದಿದ್ದಾರೆ