ಮಹಾಗಾಂವದಲ್ಲಿ ಡಿಸಿ ಗ್ರಾಮ ವಾಸ್ತವ್ಯ: ಜನರ ಸಮಸ್ಯೆ ,ಸಂಕಷ್ಟಗಳಿಗೆ ಸ್ಪಂದನೆ

ಕಲಬುರಗಿ,ಜು.16-ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಂಗವಾಗಿ ಗ್ರಾಮಸ್ಥರ ಅಹವಾಲು ಆಲಿಸಲು ಇಂದು ಕಮಲಾಪೂರ ತಾಲೂಕಿನ ಮಹಾಗಾಂವ ಗ್ರಾಮಕ್ಕೆ ಆಗಮಿಸಿದ ಡಿ.ಸಿ. ಯಶವಂತ ವಿ. ಗುರುಕರ್ ಅವರಿಗೆ ಗ್ರಾಮಸ್ಥರು ಮತ್ತು ನೂರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸಂಭ್ರಮದ ಸ್ವಾಗತ ಕೋರಿದರು.
ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಡಿ.ಸಿ. ಅವರಿಗೆ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಡಿ.ಸಿ. ಯಶವಂತ ವಿ. ಗುರುಕರ್ ಮತ್ತು ತಹಶೀಲ್ದಾರು ಸುರೇಶ ಶರ್ಮಾ ಅವರನ್ನು ಎತ್ತಿನ ಚಕಡಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು.
ಡೊಳ್ಳು, ಹಲಗೆ ವಾದನ, ಲಂಬಾಣಿ ಮಹಿಳೆಯರ ನೃತ್ಯ, ಶಾಲಾ ಮಕ್ಕಳ ಲೇಜಿಮ್ ನೃತ್ಯ ಮೆರವಣಿಗೆಗೆ ಕಳೆ ತಂದಿತು.
ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ಮಹಾಗಾಂವ ಗ್ರಾಮ ಪಂಚಾಯತಿ ಅಧ್ಯಕ್ಷೆ ಮನಿಷಾ ನಂದಕುಮಾರ ಹರಸೂರ, ಸಹಾಯಕ ಅಯುಕ್ತೆ ಮೋನಾ ರೋಟ್, ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಅಲ್ಲಾಭಕಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಡಿ.ಡಿ.ಎಲ್.ಆರ್. ಶಂಕರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಬೆಣ್ಣೂರಕರ್, ತಹಶೀಲ್ದಾರ ಸುರೇಶ ಶರ್ಮಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಕೇಂದ್ರ, ಪಡಿತರ ಚೀಟಿ ವಿತರಣಾ ಕೇಂದ್ರ, ಪಹಣಿ ತಿದ್ದುಪಡಿ ಕೇಂದ್ರ ತೆಗೆಯಲಾಗಿತ್ತು. ಆರೋಗ್ಯ ಶಿಬಿರವು ಆಯೋಜಿಸಲಾಗಿತ್ತು.

ಅಹವಾಲು ಸ್ವೀಕಾರ
ಇದೇ ವೇಳೆ ಹಲವಾರು ಜನ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.
ಮನೆಯ ಮೇಲಿನ ವಿದ್ಯುತ್ ತಗುಲಿ ಗಂಡ ತೀರಿ ಮೂರು ವರ್ಷಗಳಾಗಿವೆ. ಶಾಸಕರಿಗೂ ಹಲವಾರು ಬಾರಿ ಮನವಿ ಮಾಡಿದ್ದೇನೆ, ಆದರೆ ನನಗೆ ಪರಿಹಾರ ಸಿಕ್ಕಿಲ್ಲ. ನೀವಾದರೂ ನನಗೆ ಪರಿಹಾರ ಕೊಡಿ ಸ್ವಾಮಿ ಎಂದು ಮಹಾಗಾಂವ ಕ್ರಾಸ್ ನಿವಾಸಿ ಶಾಂತಾಬಾಯಿ ದಿ. ನಾಗಪ್ಪ ನೀರ್ ಅವರು ಡಿ.ಸಿಗೆ ಮನವಿ ಮಾಡಿಕೊಂಡರು. ತ್ರಿಚಕ್ರ ವಾಹನ ಒದಗಿಸುವಂತೆ ಬಬಲಾದ ಗ್ರಾಮದ ವಿಕಲಚೇತನ ಪವಿತ್ರಾ ಅವರು ಡಿ.ಸಿ.ಗೆ ಮನವಿ ಪತ್ರ ನೀಡಿದರು.

ಸಹಾಯಧನ ವಿತರಣೆ
ಇದೇ ವೇಳೆ ಜಿಲ್ಲಾಧಿಕಾರಿಗಳು ಸ್ತ್ರೀ ಶಕ್ತಿ ಗುಂಪುಗಳಿಗೆ 2 ಲಕ್ಷ ರೂ. ಸಹಾಯಧನವನ್ನು ಡಿ.ಸಿ.ಸಿ ಬ್ಯಾಂಕಿನಿಂದ ವಿತರಣೆ ಮಾಡಿದರು. ಒಟ್ಟು 9 ಫಲಾನುಭವಿಗಳಿಗೆ 18 ಲಕ್ಷ ರೂ. ವಿತರಣೆ ಮಾಡಲಾಯಿತು.ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಇನ್ಸ್ಪೈರ್ ಅವಾರ್ಡ್ ಪಡೆದ ತಾಲೂಕಿನ ಭೂಸಣಗಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ತನುಜಾ, ಪೂಜಾ ಅವರನ್ನು ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.