ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

ಉಜ್ಜಯಿನಿ,ಸೆ.೧೬-ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಶ್ವವಿಖ್ಯಾತ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಬಾಬಾ ಮಹಾಕಾಲ್ ದರ್ಶನಕ್ಕೆ ಇದೀಗ ವಸ್ತ್ರ ಸಂಹಿತೆಯನ್ನು ಜಾರಿ ಮಾಡಲಾಗಿದೆ. ಅದೇ ಸಮಯದಲ್ಲಿ, ಅಲ್ಲಿ ಕೆಲವು ಪಾಶ್ಚಾತ್ಯ ಮಾದರಿಯ ಬಟ್ಟೆಗಳನ್ನು ಧರಿಸಲು ನಿಷೇಧ ವಿಧಿಸಲಾಗಿದೆ .ಸಾಮಾನ್ಯ ಭಕ್ತರಿಗೆ ವಸ್ತ್ರಸಂಹಿತೆಯಲ್ಲಿ ಮಾತ್ರ ದೇವಾಲಯದ ಗರ್ಭಗುಡಿ ಪ್ರವೇಶಿಸಲು ಅವಕಾಶವಿರುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪುರುಷರಿಗೆ ಪಂಜೆ, ಶಲ್ಯ ಕಡ್ಡಾಯ ಮಾಡಿದರೆ, ಮಹಿಳೆಯರಿಗೆ ಸೀರೆ ಕಡ್ಡಾಯ ಮಾಡಲಾಗಿದೆ.
ಮಹಾಕಾಳೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಭೆಯು ಮಹಾಕಾಲ್ ಲೋಕದ ನಿಯಂತ್ರಣ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಕುಮಾರ್ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಗರ್ಭಗುಡಿ ತೆರೆಯುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಲಿಲ್ಲ ಆದರೆ ಗರ್ಭಗುಡಿ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೆ ತರಲು ತೀರ್ಮಾನಿಸಲಾಯಿತು.
ಜತೆಗೆ ಉಜ್ಜಯಿನಿ ನಿವಾಸಿಗಳಿಗೆ ವಾರಕ್ಕೊಮ್ಮೆ ಭಸ್ಮ ಆರತಿಗೆ ಉಚಿತ ಪ್ರವೇಶ ಕಲ್ಪಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.
ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎರಡೂವರೆ ತಿಂಗಳಿನಿಂದ ಮುಚ್ಚಿದ್ದ ಗರ್ಭಗುಡಿ ತೆರೆಯುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಲಿಲ್ಲ, ಆದರೆ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಲ್ಲದೇ ಉಜ್ಜಯಿನಿ ನಗರದ ಜನತೆಗೆ ಮಂಗಳವಾರ ಭಸ್ಮ ಆರತಿಯಲ್ಲಿ ೩೦೦ ರಿಂದ ೪೦೦ ಭಕ್ತರಿಗೆ ಉಚಿತ ಪ್ರವೇಶ ದೊರೆಯಲಿದೆ.
ಒಂದು ವಾರದ ನಂತರ ಗರ್ಭಗುಡಿ ತೆರೆಯುವ ಕುರಿತು ತೀರ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ್ ಪುರಷೋತ್ತಮ್ ತಿಳಿಸಿದ್ದಾರೆ. ಆದರೆ, ಪ್ರತಿದಿನ ಎರಡರಿಂದ ಎರಡೂವರೆ ಲಕ್ಷ ಜನರು ದೇವಸ್ಥಾನಕ್ಕೆ ಬರುತ್ತಿರುವುದರಿಂದ ಎಲ್ಲರಿಗೂ ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.