
ಕಲಬುರಗಿ,ಆ.23-ನಗರದ ಗಣೇಶನಗರದಲ್ಲಿರುವ ಜಗದ್ಗುರು ರೇಣುಕಾಚಾರ್ಯರ ಕಲ್ಯಾಣ ಮಂಟಪದ 25ನೇ ವರ್ಷದ (ಬೆಳ್ಳಿ ಹಬ್ಬ ) ರಜತ ಮಹೋತ್ಸವದ ಅಂಗವಾಗಿ ಶ್ರಾವಣ ಮಾಸದ ನಿಮಿತ್ಯ ಶ್ರೀಮದ್ ರಂಭಾಪುರಿ ಜಗದ್ಗುರು ವಿಮಲ ರೇಣುಕಾ ವೀರ ಗಂಗಾಧರ ಶಿವಾಚಾರ್ಯ ಭಗವತ್ಪಾದರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪಾಳಾ ಮೂಲ ಕಟ್ಟಿಮನಿ ಹಿರೇಮಠದ ಗುರುಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿ, ಮುಕ್ತಿ ಮಂದಿರ ಮಹರ್ಷಿ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ವೀರಶೈವ ಧರ್ಮದ ಮಹೋನ್ನತಿಗಾಗಿ ಸಾಕಷ್ಟು ಶ್ರಮವಹಿಸಿದ ಪರಮ ಪೂಜ್ಯರು, ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ 119ನೇಯ ಜಗದ್ಗುರುಗಳಾಗಿ ನಾಡಿನಲ್ಲೆಡೆ ಸಂಚರಿಸಿ ಧರ್ಮದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಅನುಷ್ಠಾನ ತಪಸ್ಸು ಜಪ ತಪಗಳೊಂದಿಗೆ ಇಡೀ ತಮ್ಮ ಮುಕ್ಕಾಲು ಭಾಗ ಆಯುಷ್ಯವನ್ನು ಈ ಸಮಾಜಕ್ಕಾಗಿ ಸಮರ್ಪಿಸಿರುವಂತಹ ಜಗದ್ಗುರು ಭಗವತ್ಪಾದರು ಇಂತಹ ಪುಣ್ಯಮಯ ಚರಿತ್ರೆ ಕೇಳೋದು ನಮ್ಮ ನಿಮ್ಮೆಲ್ಲರ ಭಾಗ್ಯ ಎಂದರು.
ಸಮಾರಂಭದ ನೇತೃತ್ವ ವಹಿಸಿದ ಶ್ರೀವೀರ ರೇಣುಕಾ ಸೋಮೇಶ್ವರ ಐಸಿರಿ ಪ್ರಶಸ್ತಿ ವಿಭೂಷಿತರಾದ ಗಿರಿಯಪ್ಪ ತಾತನವರ ಉಪಸ್ಥಿತಿಯಲ್ಲಿ ಪುರಾಣ ಪ್ರವಚನಕಾರರಾದ ವೇದಮೂರ್ತಿ ಪಂಡಿತ್ ತೋಟಯ್ಯ ಶಾಸ್ತ್ರಿಗಳು ಅಬ್ಬೆ ತುಮಕೂರು ಅವರು ಮಾತನಾಡಿ, ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ನುಡಿಯೊಂದಿಗೆ ಸಿಂಹ ಘರ್ಜನೆ ಮಾಡಿದವರು, ಧರ್ಮ ದ್ವಜವನ್ನು ಎತ್ತಿ ಹಿಡಿದು ವೀರಶೈವ ಧರ್ಮ ಪತಾಕೆಯನ್ನು ಬಾನೆತ್ತರಕ್ಕೆ ಪಸರಿಸಿದ ಕೊಡುಗೆ ಪೂಜ್ಯ ಜಗದ್ಗುರುಗಳವರಿಗೆ ಸಲ್ಲುತ್ತದೆ, ಬಂದ ಭಕ್ತಾದಿಗಳಿಗೆ ಸದಾ ಆಚಾರ ವಿಚಾರ ಸದಾಚಾರಗಳನ್ನ ಬೋಧಿಸುವುದರ ಮೂಲಕ ಜಗತ್ತಿನಲ್ಲಿ ಜನಜಾಗೃತಿ ಉಂಟು ಮಾಡಿದವರು, ಪಂಚಪೀಠದ ಅಭಿಮಾನಿ ಭಕ್ತಾದಿಗಳಿಗೆ ತಮ್ಮ ದಿವ್ಯಶಕ್ತಿಯಿಂದ ಆಶೀರ್ವಾದ ಅನುಗ್ರಹವನ್ನು ದಯಪಾಲಿಸಿದರು ಎಂದರು. ಸಂಗೀತಗಾರರಾದ ಡಾ.ನಾಗರಾಜ್ ಕೋಟನೂರ ಡಿ, ಹಾರ್ಮೋನಿಯಂ : ಸೋಮಯ್ಯ ಗವಾಯಿಗಳು ಸಿದ್ನೂರ್, ತಬಲಾ: ಸಂತೋಷ್ ಕುಮಾರ್ ಕೂಡ್ಲಿ ಅವರು ಸಂಗೀತ ಸೇವೆ ಸಲ್ಲಿಸಿದರು. ಜಂಬಯ್ಯ ಸ್ವಾಮಿ ಅಲ್ಲೂರು ಬಸವಣ್ಣವರಾದ ಬಸಣ್ಣ ಕಣ್ಣಿ ಹಾಗೂ ಜಾಗೃತಿ ಕಾಲೋನಿ (ಕಣ್ಮಸ್ ಲೇಔಟ್ ) ಸಮಸ್ತ ಭಕ್ತಾದಿಗಳು ಪಾಲ್ಗೊಂಡು ಭಾಗವಹಿಸಿದ್ದರು. ಶಿವಾಜಿ ಜಮಾದಾರ್ ಸಂಚಾಲನೆ ಮಾಡಿದರು.