ಮಹರ್ಷಿ ವಾಲ್ಮೀಕಿಯವರ ಚಿಂತನೆಗಳು ವಿಶ್ವಕ್ಕೆ ಮಾದರಿ : ಪ್ರೊ. ದಯಾನಂದ ಅಗಸರ

ಕಲಬುರಗಿ:ಅ.30: ಮಹರ್ಷಿ ವಾಲ್ಮೀಕಿ ಅವರು ಮಹಾನ್ ತಪಸ್ವಿಯಾಗಿದ್ದರು. ತಪಸ್ಸಿನಿಂದ ಗಳಿಸಿಕೊಂಡ ಜ್ಞಾನದಿಂದ ಅವರ ವ್ಯಕ್ತಿತ್ವ ಮತ್ತು ಜನಪರ ಚಿಂತನೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ. ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನಾ ಪೀಠದ ವತಿಯಿಂದ ಶನಿವಾರ ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ ಶ್ರೀ. ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಶ್ರೀ. ಮಹರ್ಷಿ ವಾಲ್ಮೀಕಿಯವರು ಬಾಲ್ಯವಸ್ಥೆಯಿಂದಲೇ ಪ್ರಖರವಾದ ಜ್ಞಾನ ಪಡೆಯಲು ಸೆವೆಸಿದ ಬದುಕು ನಿಜಕ್ಕೂ ವಿಸ್ಮಯ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಶರಣಪ್ಪ ಮಾತನಾಡಿ ಚರಿತ್ರೆಯಲ್ಲಿನ ಮಹಾನ್ ಚಿಂತಕರಾದ ಮಹಾವೀರ, ಗೌತಮ ಬುದ್ಧ ಮುಂತಾದ ಸಂತರು ತಮ್ಮ ಜೀವನದಲ್ಲಿ ಧ್ಯಾನಸ್ಥ ಸ್ಥಿತಿ ಮತ್ತು ತಪಸ್ಸಿನ ಮೂಲಕ ಚಿಂತನೆಯಲ್ಲಿ ತೊಡಗಿ ಶ್ರೇಷ್ಠ ಸಂತರು ಎನಿಸಿಕೊಂಡಿದ್ದಾರೆ. ವಾಲ್ಮೀಕಿಯವರಂತೆ ವಿದ್ಯಾರ್ಥಿ ಸಮೂಹ ವಾಸ್ತವಿಕ ದೃಷ್ಠಿಕೋನದಲ್ಲಿ ಚಿಂತಿಸುವ ಮೂಲಕ ಬದುಕನ್ನು ಕಂಡುಕೊಳ್ಳಬೇಕು. ವಾಲ್ಮೀಕಿ ಅವರು ಬರೆದ ರಾಮಾಯಣದಲ್ಲಿನ ಕಥಸಾರದಿಂದ ರಾಮ ಸೀತೆ ಇಬ್ಬರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯಗಳಲ್ಲಿ ಮತ್ತು ಕಥೆಗಳಲ್ಲಿ ಅಷ್ಟೇ ಅಲ್ಲದೇ ವರ್ತಮಾನದಲ್ಲೂ ಚರ್ಚಿತರಾಗುತ್ತಿದ್ದಾರೆ. ಆದರಿಂದ ರಾಮಾಯಣವನ್ನು ಓದುವ ಮತ್ತು ಚರ್ಚಿಸುವ ಮೂಲಕ ಅಲ್ಲಿನ ಮಹತ್ವದ ಅಂಶಗಳನ್ನು ಹೊಸ ದೃಷ್ಠಿಕೋನದಲ್ಲಿ ಚಿಂತಿಸಬೇಕಿದೆ ಎಂದರು.
ಶ್ರೀ. ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನಾ ಪೀಠದ ನಿರ್ದೇಶಕ ಡಾ. ಡಿ. ನಿಂಗಣ್ಣ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ. ಮಹರ್ಷಿ ವಾಲ್ಮೀಕಿ ಅವರನ್ನ ರಾಮಾಯಣದ ಕತೃತು ಹಾಗೂ ಲವ ಮತ್ತು ಕುಶರ ಗುರುಗಳು ಎಂಬ ಸೀಮಿತ ಅರ್ಥದಲ್ಲಿ ನೋಡದೆ ಜಗತ್ತಿನ ಜೀವವಿಜ್ಞಾನಿಯಾಗಿ ನೋಡುವ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳವ ಅವಶ್ಯಕತೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಬೈರಪ್ಪ, ಪರೀಕ್ಷಾ ವಿಭಾಗದ ವಿಶೇಷಾಧಿಕಾರಿ ಪ್ರೊ. ಬಸವರಾಜ ಸಣ್ಣಕ್ಕಿ, ಐಕ್ಯುಎಸಿ ನಿರ್ದೇಶಕ ಪ್ರೊ. ಕೆರೂರು, ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಆರ್. ಬಡಿಗೇರ್ ಉಪಸ್ಥಿತರಿದ್ದರು.