ಮಹರ್ಷಿ ಕಣ್ವ ಮಾರ್ಗ, ಮಹರ್ಷಿ ಕಣ್ವ ವೃತ್ತ ಉದ್ಘಾಟನೆ

ರಾಯಚೂರು,ಮಾ.೧೯- ನಗರದ ಎಲ್‌ವಿಡಿ ಕಾಲೇಜಿನಿಂದ ಅಪೋಲೋ ಫಾರ್ಮಸಿ ಕಡೆ ಹೋಗುವ ಮಾರ್ಗ ಮತ್ತು ಜವಾಹರ ನಗರದಿಂದ ವಾಸವಿ ನಗರದ ಕೆಹೆಚ್‌ಬಿ ಗೆ ಸೇರುವ ವೃತ್ತ, ಮಹರ್ಷಿ ಕಣ್ವ ಮಾರ್ಗ ಮತ್ತು ಮಹರ್ಷಿ ಕಣ್ವ ವೃತ್ತವನ್ನು ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಶ್ರೀಮತ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಸಿಹೊಳೆ ಮತ್ತು ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರತೀರ್ಥ, ಶ್ರೀಪಾದಂಗಳವರು, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಇವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟನೆ ನಂತರ ಜವಾಹರ ನಗರದ ಶ್ರೀ ವಿಠ್ಠಲ ಕೃಷ್ಣ ಮಂದಿರದಲ್ಲಿ ಆಯೋಜಿಸಿದ್ದ, ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಾತನಾಡಿ ಸನಾತನ ಹಿಂದೂ ಧರ್ಮದ ಮಂತ್ರ ದ್ರಷ್ಟಾರ ರಾದಂಥ ಮಹರ್ಷಿ ಕಣ್ವರ ಹೆಸರಿನಲ್ಲಿ ಮಾರ್ಗ ಮತ್ತು ವೃತ್ತ ಲೋಕಾರ್ಪಣೆ ಮಾಡಿ ಸಾಂಸ್ಕೃತಿಕ ನಗರವಾದ ರಾಯಚೂರಿನಲ್ಲಿ ಇದು ಆಗುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ತಿಳಿಸುತ್ತ,ಭಾರತೀಯ ಸಂಸ್ಕೃತಿ, ಪರಂಪರೆ, ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಅನನ್ಯ ಕೊಡುಗೆ ನೀಡಿರುವ ಮತ್ತು ಮಹರ್ಷಿ ಕಣ್ವರ ಹೆಸರನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಮಹರ್ಷಿ ಕಣ್ವರ ವೃತ್ತ ಮತ್ತು ರಸ್ತೆ ನಾಮಕರಣ ಮಾಡಿರುವ ರಾಯಚೂರಿನ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಶ್ರೀಮತ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಸಿಹೊಳೆಯ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ಮಾತನಾಡಿ ವಿದ್ಯಾ ಕೇಂದ್ರವಾದ ಎಲ್.ವಿ.ಡಿ. ಕಾಲೇಜಿನ ಹತ್ತಿರ ಬರುವ ರಸ್ತೆ ಮತ್ತು ವೃತ್ತವನ್ನು ಮಹರ್ಷಿ ಕಣ್ವರ ಹೆಸರಿನಲ್ಲಿ ನಾಮಕರಣ ಮಾಡಿರುವುದು ಅತ್ಯಂತ ಸೂಕ್ತ ಎಂದರು.
ಲೋಕಸಭಾ ಸದಸ್ಯರಾದ ರಾಜಾಅಮರೇಶ್ವರ ನಾಯಕ್, ಶಾಸಕರಾದ ಡಾ. ಎಸ್ ಶಿವರಾಜ ಪಾಟೀಲ್, ಮಾಜಿ ವಿಧಾನಪರಿಷತ್ ಸದಸ್ಯ ಎನ್. ಶಂಕ್ರಪ್ಪ, ನಗರಸಭಾ ಸದಸ್ಯರಾದ ಶಶಿ ರಾಜ್ ಮತ್ತು ಲಲಿತಾ ಕಡಗೋಲ ಆಂಜನೇಯ ಹಾಗೂ ಕಣ್ವ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಕಿಶನರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣ್ವ ಪರಿಷತ್ತಿನ ರಾಷ್ಟ್ರಾಧ್ಯಕ್ಷರಾದ ಪಿ. ಎಸ್. ಕುಲಕರ್ಣಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಆರ್ ಲಕ್ಷ್ಮಿಕಾಂತ್, ಶ್ಯಾಮ್ ಕಣ್ವ, ನಾಗರಾಜ್ ಕೋನಕುಂಟ್ಲು, ವಿಪ್ರಶ್ರೀ ಮೋಹನ್ ದೇವರು, ಸತ್ಯನಾರಾಯಣ ಮುಜುಂದಾರ, ಪರಿಷತ್ತಿನ ಪದಾಧಿಕಾರಿಗಳಾದ ವೆಂಕಟೇಶ್ ಕುಲಕರ್ಣಿ ವಿನುತ್ ಜೋಶಿ, ರಾಘವೇಂದ್ರ ಕೊಡೆಕಲ್, ಡಿಎಸ್‌ಜಿ ಕುಲಕರ್ಣಿ, ಕೆ ಎಂ ಮೋಹನ್ ಸಹಕಾರಿ ಟೈಮ್ಸ್ ಸಂಪಾದಕರು, ರಮೇಶಾಚಾರ್ಯ ಬಾದರ್ಲಿ ಗೋವಿಂದರಾವ್ ಆಲಂಪಲ್ಲಿ, ನಾರಾಯಣರಾವ್ ಪೋರತಿಪ್ಲಿ, ಶ್ರೀನಿವಾಸರಾಜ ದೇಸಾಯಿ, ಪ್ರದೀಪ್ ಸಾನಬಾಳ, ಸತ್ಯನಾರಾಯಣ ಜೋಶಿ, ಸುರೇಶ್ ಚಿಂತಾಮಣಿ, ಪ್ರಸನ್ನ ಅಲಂಪಲ್ಲಿ, ಭೀಮರಾವ್ ಕುಲಕರ್ಣಿ ಸೇರಿದಂತೆ ಮಹಿಳೆಯರು ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು, ತಿರುಪತಿ ಜೋಶಿ ನಿರೂಪಿಸಿದರು.