ಮಹನೀಯರ ಸಂದೇಶ ಜೀವನದಲ್ಲಿ ಅಳವಡಿಕೆಯ ಅಗತ್ಯ

ಕಲಬುರಗಿ:ಫೆ.18: ಹರ್ಡೇಕರ ಮಂಜಪ್ಪನವರು ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಅನುಯಾಯಿಯಾಗಿ, ಕರ್ನಾಟಕದಲ್ಲಿ ಅವುಗಳನ್ನು ಜಾರಿಗೊಳಿಸುವ ಮೂಲಕ ‘ಕರ್ನಾಟಕದ ಗಾಂಧಿ’ಯಾಗಿದ್ದಾರೆ. ಜಾತಿ ಪದ್ಧತಿ, ಮೂಢನಂಬಿಕೆ, ಅಂಧಶೃದ್ಧೆಯ ನಿರ್ಮೂಲನೆಯಂತಹ ಅನೇಕ ಸಾಮಾಜಿಕ ಸುಧಾರಣೆಗಳನ್ನು ತರಲು ಸಾಕಷ್ಟು ಪ್ರಯತ್ನಿಸಿದ್ದಾರೆ. ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕತೆಯ ಮಹಾನ ಚೇತನವಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಸಂದೇಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್‍ನಲ್ಲಿರುವ ‘ಬಸವೇಶ್ವರ ಪದವಿ ಕಾಲೇಜು ಮತ್ತು ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜು’ಗಳಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ಶರಣ ಹರ್ಡೇಕರ ಮಂಜಪ್ಪ ಮತ್ತು ರಾಮಕೃಷ್ಣ ಪರಮಹಂಸ್‍ರ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಯುವ ಸಮಾಜ ಸೇವಕ, ಕಸಾಪ ಉತ್ತರ ವಲಯದ ಕಾರ್ಯದರ್ಶಿ ನಾಗೇಶ ತಿಮಾಜಿ ಬೆಳಮಗಿ ಮಾತನಾಡಿ, ಹರ್ಡೇಕರ ಮಂಜಪ್ಪನವರು ಶರಣ ಜೀವಿ, ಸಮಾಜ ಸುಧಾರಕ, ಸ್ವಾತಂತ್ರ ಹೋರಾಟಗಾರ, ಲೇಖಕರಾಗಿ ಬಹುಮುಖ ಕೊಡುಗೆ ನೀಡಿದ್ದಾರೆ. ರಾಮಕೃಷ್ಣ ಪರಮಹಂಸ್‍ರು ಭಾರತೀಯ ಸಂಸ್ಕøತಿ, ಭವ್ಯ ಪರಂಪರೆಗಳ ಮಹತ್ವವನ್ನು ಎಲ್ಲೆಡೆ ಪ್ರಚಾರ ಮಾಡಿ ಜನಜಾಗೃತಿಯನ್ನುಂಟು ಮಾಡಿದ್ದಾರೆ. ಸ್ವಾಮಿ ವಿವೇಕಾನಂದ ಅವರ ಗುರುವಾಗಿ ವಿವೇಕಾನಂದ ಅವರಿಗೆ ದಿವ್ಯ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಶ್ರೀಮಂತ ಕೋಟನೂರ, ಅಂಬಿಕಾ ಯಳಸಂಗಿ, ಹಣಮಯ್ಯ ಗುತ್ತೇದಾರ, ಸಾತಲಿಂಗಪ್ಪ ಪೊಲೀಸ ಪಾಟೀಲ್, ಶ್ರೀಶೈಲ ಪೂಜಾರಿ, ಅಲ್ತಫ್ ಮುಜಾವರ, ಅಮಿತ್ ಕಟ್ಟಿಮನಿ, ಅಭಿಷೇಕ ಸೇರಿದಂತೆ ಇನ್ನಿತರರಿದ್ದರು.