ಮಹನೀಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ, ತತ್ವಾದರ್ಶನ ಮರೆಯುತ್ತಿದ್ದಾರೆ: ಕುರುಬೂರು ಶಾಂತಕುಮಾರ್ ವಿಷಾದ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.10:- ಪ್ರಸ್ತುತ ದಿನಮಾನಗಳಲ್ಲಿ ಸಮಾಜ ಸುಧಾರಕರ, ಮಹನೀಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ, ಅವರ ತತ್ವಾದರ್ಶಗಳನ್ನು ಮರೆಯುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ವಿಷಾದಿಸಿದರು.
ಎರಡು ಸಂಘಟನೆಗಳ ಮೈಸೂರು- ಚಾಮರಾಜನಗರ ಜಿಲ್ಲಾ ಘಟಕಗಳ ವತಿಯಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಕಾಯಕದಲ್ಲಿ ನಿಷ್ಠೆ ತೋರಿರುವ ಐವರಿಗೆ ಕಾಯಕ ಶ್ರೇಷ್ಠ ಪುರಸ್ಕಾರ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಜಯಂತಿಗಳ ಆಚರಣೆ, ಸನ್ಮಾನದಲ್ಲಿ ನಮಗೆ ನಂಬಿಕೆ ಇಲ್ಲ. ಆದರೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಕಾಯಕದಲ್ಲಿ ನಿಷ್ಠೆ ತೋರಿದವರನ್ನು ಗೌರವಿಸಿ, ಸಮಾಜಕ್ಕೆ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ಹಾಗೂ ಈ ಬಸವಣ್ಣನನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈ ಬಾರಿ ಜಯಂತಿ ಆಚರಿಸಲಾಗುತ್ತಿದೆ ಎಂದರು.
12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದರು. ಇಂದು ಅದೇ ಮೀಸಲಾತಿ ಮತಗಳಿಕೆಯ ಅಸ್ತ್ರವಾಗಿದೆ. ಕೆಲವೇ ಕುಟುಂಬಗಳ ಸೊತ್ತಾಗಿದೆ. ಇದು ನ್ಯಾಯವಲ್ಲ ಎಂದರು.
ಹಳ್ಳಿಗಳಲ್ಲಿ ಯುವಕರು ಮೊಬೈಲ್ ಬಳಸಿ ಆನ್‍ಲೈನ್ ಮೂಲಕ ಆಟವಾಡಿ ದಾರಿ ತಪ್ಪುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ದೂರವಾಗುತ್ತಿದೆ. ಇದನ್ನು ಸರಿಪಡಿಸುವ ದಿಕ್ಕಿನಲ್ಲಿ ಮಠಮಾನ್ಯಗಳು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ತತ್ವ, ಆದರ್ಶಗಳನ್ನು ಸಾರಿದ ಬಸವಣ್ಣನವರ ವಿಚಾರಧಾರೆಗಳನ್ನು ಪಾಲಿಸಬೇಕಾಗಿದೆ. ಪ್ರತಿಯೊಬ್ಬ ರೈತರು ಮೇ 10 ರಂದು ಒಂದು ಗಿಡ ನೆಡುವ ಮೂಲಕ ಅರ್ಥವೂಪ್ರಣವಾಗಿ ಜಯಂತಿ ಆಚರಿಸಬೇಕು. ಆ ಮೂಲಕ ಪರಿಸರ ಕಾಪಾಡಬೇಕು. ಮಳೆ ನೀರು ಹರಿದು ಹೋಗದಂತೆ ತಡೆಯಲು ಕ್ರಮ ವಹಿಸಬೇಕು ಎಂದು ಅವರು ಕರೆ ನೀಡಿದರು.
ಮೀಸಲಾತಿ ಅರ್ಹ ಬಡವರಿಗೆ ತಲುಪಬೇಕು. ಮತಗಳಿಕೆಗಾಗಿ ಜಾತಿಯ ವಿಷ ಬೀಜ ಬಿತ್ತುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದರು.
ಸಮಾಜಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಜನರೇ ಕಣ್ಮರೆಯಾಗುತ್ತಿದ್ದಾರೆ. ನಮ್ಮ ಸಂಘಟನೆಯಿಂದ ಗೌರವಿಸುತ್ತಿರುವವರು ಆದರ್ಶ ಇಟ್ಟುಕೊಂಡು ವೃತ್ತಿ ನಡೆಸುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಸರ್ ಎಂ.ವಿ. ಸ್ನಾತಕೋತ್ತರ ಕೇಂದ್ರದ ವಿಶ್ರಾಂತ ನಿರ್ದೇಶಕ ಡಾ.ಎಂ.ಜಿ. ಬಸವರಾಜ ಮಾತನಾಡಿ, ರೈತರು ಕೆಟ್ಟ ದಾರಿಗೆ ಹೋಗಬಾರದು. ಪರಸ್ವರ ಸಹಕಾರಿಗಳಾಗಿ ಒಳ್ಳೆಯ ಆಲೋಚನೆ ಮಾಡಬೇಕು. ಭೂಮಿತಾಯಿಗೆ ಗೊರವ ಕೊಡಬೇಕು ಸಾವಯವ, ಸಮಗ್ರ ಕೃಷಿ ಮಾಡಬೇಕು. ದನಕರುಗಳನ್ನು ಸಾಕಿ, ಸಹಜೀವನ ನಡೆಸಬೇಕು. ರಾಸಾಯನಿಕ ಗೊಬ್ಬರ, ಕಳೆ, ಕ್ರಿಮಿನಾಶಕ ಬಳಸಬೇಡಿ ಎಂದು ಅವರು ಹೇಳಿದರು.
ಒಕ್ಕೂಟದ ರಾಜ್ಯ ಖಜಾಂಚಿ ಎಂ.ಬಿ. ಚೇತನ್ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲಿ ಕೆರೆಗಳನ್ನು ಗುರುತಿಸಬೇಕು ಹಾಗೂ ಅವುಗಳಿಗೆ ನೀರು ತುಂಬಿಸುವಂತೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಕಳುಹಿಸಿಕೊಡಬೇಕು ಎಂದು ಸಲಹೆ ಮಾಡಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಅತ್ತಹಳ್ಳಿ ದೇವರಾಜ್ ಮೊದಲಾದವರು ಇದ್ದರು.
ಮಹೇಶ್ ಮತ್ತು ತಂಡದವರು ರೈತಗೀತೆ ಹಾಡಿದರು. ಶರಣು ವಿಶ್ವ ವಚನ ಫೌಂಡೇಷನ್‍ನ ಸಂಸ್ಥಾಪಕ ವಚನ ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು ಒಕ್ಕೂಟದ ಜಿಲ್ಲಾಧ್ಯಕ್ಷ. ಬರಡನಪುರ ನಾಗರಾಜ್ ಸ್ವಾಗತಿಸಿದರು.
ಕಾಯಕ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರು
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜೆಎಸ್‍ಎಸ್ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಕ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ, ಪ್ರಗತಿಪರ ಕೃಷಿಕರಾದ ಚಾಮರಾಜನಗರದ ಎಸ್. ರಾಜಶೇಖರ್ ಉಡಿಗಾಲ, ನಂಜನಗೂಡು ತಾ. ದೇವಿರಮ್ಮನಹಳ್ಳಿಯ ಕುಮಾರ್, ಕೃಷಿ ಕಾರ್ಮಿಕರಾದ ವಾಜಮಂಗಲದ ಸಾಕಮ್ಮ ಅವರಿಗೆ ಕಾಯಕ ಶ್ರೇಷ್ಠ ಪುರಸ್ಕಾರ ಪ್ರದಾನ ಮಾಡಲಾಯಿತು.