ಮಹದೇಶ್ವರ ಬೆಟ್ಟದಲ್ಲಿ ಲಾಡು ದರ ಏರಿಕೆ

ಚಾಮರಾಜನಗರ,ನ.೯-ಲಾಡು ತಯಾರಿಕೆಯ ಕಚ್ಚಾವಸ್ತು ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸುಪ್ರಸಿದ್ಧ ಪುಣ್ಯಕ್ಷೇತ್ರ ಮಲೆ ಮಹಾದೇಶ್ವರ ಬೆಟ್ಟದ ದೇವಾಲಯದಲ್ಲಿ ಭಕ್ತರಿಗೆ ನೀಡುವ ಲಾಡು ದರವನ್ನು ಏರಿಕೆ ಮಾಡಲಾಗಿದೆ.
೧೦೦ ಗ್ರಾಂ.ಲಾಡುಗೆ ಇಂದಿನಿಂದ ೨೫ ರೂ.ನಿಗದಿ ಪಡಿಸಲಾಗಿದ್ದು, ಈ ಹಿಂದೆ ೧೦೦ ಗ್ರಾಂ.ಲಾಡು ಬೆಲೆ ೨೦ ರೂ.ಇತ್ತು ಲಾಡು ತಯಾರಿಕಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ೫ ರೂ. ಬೆಲೆ ಏರಿಕೆ ಮಾಡಲಾಗಿದೆ.
ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತಂದುಕೊಡುವ ದೇಗುಲಗಳ ಪೈಕಿ ಎರಡನೇ ಸ್ಥಾನವನ್ನು ಅನೂರಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹಾದೇಶ್ವರ ಬೆಟ್ಟ ಪಡೆದುಕೊಂಡಿದೆ. ಅತೀ ಹೆಚ್ಚು ಭಕ್ತರನ್ನು ಹೊಂದಿರುವ ಮಾದಪ್ಪನ ಸನ್ನಿಧಿಯಲ್ಲಿ ಸಿಗುವ ಲಾಡು ದರವನ್ನು ೨೦೧೫ರಿಂದಲೂ ಏರಿಕೆ ಮಾಡಿರಲಿಲ್ಲ.
ಇದೀಗ ಲಾಡು ತಯಾರಿಕೆಯ ಕಚ್ಚಾವಸ್ತುವಿನ ಬೆಲೆ ಏರಿಕೆ, ನೌಕರರ ಸಂಬಂಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯಾ ವಿಭವಸ್ವಾಮಿ ತಿಳಿಸಿದ್ದಾರೆ.